ಮಂಗಳೂರು, ಸೆ.28: ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ಪರಿಚಯಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ನೋಂದಾಯಿತವಾಗಿರುವ ‘ನಾದ ನಂದನಂ’ (ರಿ.) ಸಂಸ್ಥೆಯ ಪ್ರಥಮ ಭಜನಾ-ಸಂಕೀರ್ತನೋತ್ಸವ ಹಾಗೂ ಉದ್ಘಾಟನಾ ಸಮಾರಂಭ ಅ.4ರಂದು ಸಂಜೆ 5 ಗಂಟೆಗೆ ಉರ್ವಾ ಸ್ಟೋರ್ನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಕುರಿತು ಸೋಮವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿದರು.

ಕರ್ನಾಟಕವನ್ನು ಕೇಂದ್ರವಾಗಿರಿಸಿಕೊಂಡು ರೂಪುಗೊಂಡಿರುವ ‘ನಾದ ನಂದನಂ’ ಸಂಸ್ಥೆಯು ಸಂಗೀತದ ಮೂಲಕ ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಜನರಿಗೆ ತಲುಪಿಸುವ ಆಶಯ ಹೊಂದಿದೆ. ಸಂಸ್ಥೆಯ ಮೊದಲ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳೊಂದಿಗೆ ಪುರಂದರದಾಸ, ಕನಕದಾಸ, ಬಸವಣ್ಣ ಮತ್ತು ಶರಣರ ತತ್ವಪದಗಳನ್ನು ವಿವಿಧ ಸಂಗೀತ ಪ್ರಕಾರಗಳಲ್ಲಿ ಪ್ರಸ್ತುತಪಡಿಸಲಾಗುವುದು.
ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ಶಂಕರ ಶ್ಯಾನುಭೋಗ್ ಹಾಗೂ ಮೂರು ಬಾರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ರಮೇಶ್ ಚಂದ್ರ, ಬೆಂಗಳೂರು ಅವರ ನೇತೃತ್ವದಲ್ಲಿ 19 ಕಲಾವಿದರ ತಂಡ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ. ಭಕ್ತಿ, ಭಾವ, ಜಾನಪದ ಹಾಗೂ ಚಿತ್ರಗೀತೆಗಳ ಸಂಗಮದೊಂದಿಗೆ ಬಹುಭಾಷಾ ಹಾಡುಗಳ ಪ್ರಸ್ತುತಿ ಕಾರ್ಯಕ್ರಮದ ವಿಶೇಷತೆಯಾಗಿರಲಿದೆ.

ಪಕ್ವ ಹಾಡುಗಾರರು ಹಾಗೂ ನುರಿತ ಸಂಗೀತಗಾರರೊಂದಿಗೆ ಎಲ್ಇಡಿ ಪರದೆ, ವಿಶೇಷ ಧ್ವನಿ ಮತ್ತು ಬೆಳಕಿನ ರಂಗ ವಿನ್ಯಾಸವನ್ನು ಬಳಸಿಕೊಂಡು ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ರೂಪಿಸಲಾಗಿದೆ. ಕರ್ನಾಟಕದಲ್ಲಿ ಇಂತಹ ವಿಭಿನ್ನ ಸಂಗೀತ ಪ್ರಸ್ತುತಿಯ ಮೂಲಕ ಭಜನಾ-ಸಂಕೀರ್ತನೋತ್ಸವ ಆಯೋಜಿಸುತ್ತಿರುವುದು ವಿಶೇಷವಾಗಿದೆ.

‘ನಾದ ನಂದನಂ’ ಸಂಸ್ಥೆಯನ್ನು ಖ್ಯಾತ ಗಾಯಕ ಶಂಕರ ಶ್ಯಾನುಭೋಗ್ ಅವರು ನಂದಾದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿಯೂ ಸಂಸ್ಥೆಯ ನೇತೃತ್ವದಲ್ಲಿ ಭಜನಾ-ಸಂಕೀರ್ತನೋತ್ಸವ ಹಾಗೂ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸಂಘಟಕ ಎಸ್.ಎಲ್. ಭಾರದ್ವಾಜ್ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಉಡುಪಿಯ ಶ್ಯಾಮಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಜಿ. ಶಂಕರ್, ಕರ್ನಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಸರ್ವೋತ್ತಮ ಶೆಟ್ಟಿ ಸೇರಿದಂತೆ ಬ್ಯಾಂಕಿಂಗ್, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಉಚಿತ ಪಾಸ್ ಲಭ್ಯ
ಕಾರ್ಯಕ್ರಮಕ್ಕೆ ಉಚಿತ ಪಾಸ್ಗಳು ಮಂಗಳೂರಿನ ಓಷನ್ ಪರ್ಲ್ (ನವಭಾರತ್ ಸರ್ಕಲ್), ತಾಜ್ ಮಹಲ್, ಪತ್ತುಮುಡಿ (ಲಾಲ್ಬಾಗ್), ಅಯೋಧ್ಯಾ (ಕೊಡಿಯಾಲ್ಬೈಲ್) ಹಾಗೂ ಪದ್ಮಶ್ರೀ (ಪಂಪ್ವೆಲ್) ಹೋಟೆಲ್ಗಳ ಕೌಂಟರ್ಗಳಲ್ಲಿ ಲಭ್ಯವಿರಲಿವೆ. ಪಾಸ್ ಪಡೆಯಲು ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕಾಗಿದೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ನಾದ ನಂದನಂ’ ಸಂಸ್ಥೆಯ ಈ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವಂತೆ ಎಸ್.ಎಲ್. ಭಾರದ್ವಾಜ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಮುಲ್ಕಿ ರವೀಂದ್ರ ಪ್ರಭು, ರಮೇಶ್ ಚಂದ್ರ, ಜಗನ್ನಾಥ್ ಶಿರ್ಲಾಲು ಹಾಗೂ ಎಸ್.ಎಲ್. ಭಾರದ್ವಾಜ್ ಉಪಸ್ಥಿತರಿದ್ದರು.

