ಮಣಿಪಾಲ, ಸೆ.28: ಕಂಬಳ ಕ್ಷೇತ್ರದಲ್ಲಿ ಹಲವು ಸಾಧನೆಗಳ ಮೂಲಕ ‘ಲೆಜೆಂಡ್’ ಪಟ್ಟಕ್ಕೇರಿದ್ದ ನಂದಳಿಕೆ ಪಾಂಡು ಎಂಬ 23 ವರ್ಷದ ಕೋಣ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದೆ.

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪಾಂಡು ತನ್ನ ಓಟ ಹಾಗೂ ಸ್ವಭಾವದಿಂದ ಕಂಬಳಾಭಿಮಾನಿಗಳ ಮನಗೆದ್ದಿತ್ತು. ಹಗ್ಗ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಪಾಂಡು, ಜೂನಿಯರ್ ವಿಭಾಗದಲ್ಲಿ ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿತ್ತು.

ಕಾರ್ಕಳದ ಜೀವನ್ದಾಸ್ ಅಡ್ಯಂತಾಯರ ಹಟ್ಟಿಯಲ್ಲಿ ಕಂಬಳ ಜೀವನ ಆರಂಭಿಸಿದ ಪಾಂಡುವನ್ನು ಬಳಿಕ ಅತ್ತೂರು ಮನ್ಮಥ ಶೆಟ್ಟಿ, ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಹಾಗೂ ನಂದಳಿಕೆ ಶ್ರೀಕಾಂತ್ ಭಟ್ ಅವರ ಹಟ್ಟಿಗೆ ಕರೆತರಲಾಗಿತ್ತು. ವಿವಿಧ ಹಂತಗಳಲ್ಲಿ ಹಲವಾರು ಪದಕಗಳನ್ನು ತನ್ನದಾಗಿಸಿಕೊಂಡಿದ್ದ ಪಾಂಡು, ಕಂಬಳದ ದಿಗ್ಗಜ ಕೋಣಗಳೊಂದಿಗೆ ಸ್ಪರ್ಧಿಸಿ ಹೆಸರು ಮಾಡಿತ್ತು.

ಖ್ಯಾತ ಮಾಜಿ ಓಟಗಾರ ನಕ್ರೆ ಜಯಕರ ಮಡಿವಾಳ ಅವರು ಪಾಂಡುವಿನೊಂದಿಗೆ ಹಲವು ಪದಕಗಳನ್ನು ಗೆದ್ದಿದ್ದರು. ಓಟದ ಕರೆಯಲ್ಲಿ ಜಯಕರ ಮಡಿವಾಳರ ಧ್ವನಿಗೆ ಪಾಂಡು ಸ್ಪಂದಿಸಿ ಓಡುತ್ತಿದ್ದ ದೃಶ್ಯ ಕಂಬಳಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ

