ಮಂಗಳೂರು: “ಇದು ಆಶೀರ್ವಚನ ನೀಡುವ ಸಮಯವಲ್ಲ, ಪ್ರತಿಭಟಿಸುವ ಸಮಯ” ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಬಿ.ಸಿ.ರೋಡ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಿರುವುದನ್ನು ಪ್ರಶ್ನಿಸಿದರು.

“ಕೋಕಾ ಕಾಯಿದೆ ನ್ಯಾಯಾಲಯದಲ್ಲಿ ಬಿದ್ದುಹೋಗಿದೆ. ಇದೀಗ ಗೂಂಡಾ ಕಾಯಿದೆ ಜಾರಿಯಾಗಿದೆ. ಜಾಮೀನು ಸಿಗಬಾರದು ಎಂಬುದು ನಿಮ್ಮ ನಿಲುವೇ?” ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ ಅವರು, ಹಿಂದೂ ಕಾರ್ಯಕರ್ತರು ಸಂಘಟನೆಗೆ ಬದ್ಧರಾಗಿ ನಿಲ್ಲುವ ಸಮಯ ಇದಾಗಿದೆ ಎಂದರು.

ಕಲ್ಲಡ್ಕ ಪ್ರಭಾಕರ ಭಟ್ ಅವರ ಹಿಂದೆ ಇಡೀ ಹಿಂದೂ ಸಮಾಜ ಇದೆ. ಸಮಾಜದ ಮುಖಂಡರಿಗೆ ಕಿರುಕುಳ ನೀಡಬಾರದು. ಭರತ್ ಕುಮ್ಡೇಲು ಅವರನ್ನು ಬಂಧಿಸಿದರೆ ಸಾವಿರಾರು ಕುಮ್ಡೇಲುಗಳು ಹುಟ್ಟಿಕೊಳ್ಳುತ್ತಾರೆ. ಭರತ್ ಅವರನ್ನು ನಿಯಂತ್ರಿಸಲು ಹೋಗಬೇಡಿ, ಗೂಂಡಾ ಕಾಯಿದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಂಟ್ವಾಳದಲ್ಲಿ ನಡೆದ ಹತ್ಯೆಯನ್ನು ಹಿಂದೂ ಸಮಾಜ ಸಮರ್ಥಿಸುವುದಿಲ್ಲ. ಯಾವುದೇ ರೀತಿಯ ಹಿಂಸಾಚಾರವನ್ನು ಸಮರ್ಥಿಸದೆ ಸಮಾಜವನ್ನು ಒಗ್ಗೂಡಿಸಿ, ಸದೃಢಗೊಳಿಸುವ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
“ರಾಜಕೀಯಕ್ಕೆ ಹೋಗಲು ಮನಸ್ಸಿದ್ದರೆ ಹೋಗಿ, ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ಈ ಭಾಗದ ಹಿಂದುತ್ವದ ಶಕ್ತಿ ಕೇಂದ್ರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಪ್ರತಿಭಟನೆಯ ಹಿನ್ನೆಲೆ ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯಿದೆ ಜಾರಿಯನ್ನು ಹಿಂಪಡೆಯುವಂತೆ ವಿಎಚ್‌ಪಿ ಮತ್ತು ಬಜರಂಗದಳ ಆಗ್ರಹಿಸಿದ್ದವು.

