
ಕುಂಬಳೆ : ಆರಿಕ್ಕಾಡಿ ಕಡವತ್ ಬಳಿ ಇದ್ದ ಟೋಲ್ ಪ್ಲಾಝಾವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಈಗ ನೆಲಸಮಗೊಳಿಸುವ ಕೆಲಸಕ್ಕೆ ಕೈಹಾಕಿದೆ.

ತಲಪಾಡಿ ಟೋಲ್ ಪ್ಲಾಝಾದಿಂದ ಕೇವಲ 23 ಕಿ.ಮೀ. ದೂರದಲ್ಲೇ ಈ ಟೋಲ್ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಚೆಂಗಳ-ನೀಲೇಶ್ವರ ರೀಚ್ನ ಪೆರಿಯ ಚಾಲಿಂಗಾಲ್ನಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ತಾತ್ಕಾಲಿಕ ನೆಪದಲ್ಲಿ ಇದನ್ನು ಆರಂಭಿಸಲಾಗಿತ್ತು.
ಇದರ ವಿರುದ್ಧ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆ ಮತ್ತು ಹೈಕೋರ್ಟ್ನಲ್ಲಿ ಸಲ್ಲಿಸಲಾದ ದಾವೆಯು ಮಹತ್ವದ ತಿರುವು ನೀಡಿತು.

ಅಂತಿಮವಾಗಿ ಹೆದ್ದಾರಿ ಇಲಾಖೆ ಹೈಕೋರ್ಟ್ಗೆ ಹಾಜರಾಗದೆ, ಕಳೆದ ಫೆಬ್ರವರಿ 4ರಂದು ಟೋಲ್ ರದ್ದುಗೊಳಿಸಿ ಆದೇಶ ಹೊರಡಿಸಿತು. ನ್ಯಾಯಾಂಗ ಮತ್ತು ಬಹಿಷ್ಕಾರದ ಹೋರಾಟದಿಂದ ರದ್ದಾದ ದೇಶದ ಮೊದಲ ಟೋಲ್ ಎಂಬ ಹೆಗ್ಗಳಿಕೆ ಇದಕ್ಕಿದೆ.
ರದ್ದಾದ ನಂತರವೂ ಗೇಟ್ ತೆರವುಗೊಳಿಸದ ಕಾರಣ ಕೆಲವು ಅಪಘಾತಗಳು ಸಂಭವಿಸಿದ್ದವು; ಇದೀಗ ತೆರವು ಕಾರ್ಯ ಆರಂಭವಾಗಿರುವುದು ಸಾರ್ವಜನಿಕರಿಗೆ ನೆಮ್ಮದಿ ತಂದಿದೆ


