ಮಂಗಳೂರು: ಕರ್ನಾಟಕ ರಾಜ್ಯ ಕಿಸಾನ್ ಸೇವಾ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ‘ಮಂಗಳೂರು ಕೃಷಿ ಹಬ್ಬ–2026’ ಅಕ್ಟೋಬರ್ 2ರಿಂದ 4ರವರೆಗೆ ಕುಲಶೇಖರದ ಕಾರ್ಡೆಲ್ ಮೈದಾನ ಹಾಗೂ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಯೋಜಕ ಅಶ್ವಿನ್ ಸಿಕ್ವೇರಾ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ರೋ ಇಂಟರ್ನ್ಯಾಷನಲ್, ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (KAPPEC), ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಬೆಳಿಗ್ಗೆ 9.30ರಿಂದ ರಾತ್ರಿ 8.30ರವರೆಗೆ ನಡೆಯುವ ಕೃಷಿ ಹಬ್ಬದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕೃಷಿ ಉದ್ಯಮಿಗಳು, ತಜ್ಞರು, ಯುವಕರು, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಆಧುನಿಕ ಕೃಷಿ ತಂತ್ರಜ್ಞಾನ, ಯಂತ್ರೋಪಕರಣಗಳು, ಸಾವಯವ ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಕೃಷಿ ಆಧಾರಿತ ಉದ್ಯಮಗಳ ಕುರಿತು ರೈತರಿಗೆ ನೇರ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಕೃಷಿ ಹಬ್ಬದಲ್ಲಿ ಕೃಷಿ ಯಂತ್ರ ಮೇಳ, ಸಿರಿಧಾನ್ಯ ಮೇಳ, ಸಸ್ಯ ಸಂತೆ ಮತ್ತು ನರ್ಸರಿ ಉತ್ಪನ್ನಗಳ ಪ್ರದರ್ಶನ, ಜೇನು ಕೃಷಿ ಮೇಳ, ಸಾವಯವ ಕೃಷಿ ಮಾಹಿತಿ, ರೈತರ ಮಾರುಕಟ್ಟೆ, ಆಹಾರ ಮೇಳ, ಕೃಷಿ ಉದ್ಯಮ ಮೇಳ ಹಾಗೂ ಸಣ್ಣ ಪ್ರಮಾಣದ ಉದ್ಯಮಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತೆಂಗು, ಅಡಿಕೆ, ಕಾಳುಮೆಣಸು ಸೇರಿದಂತೆ ಪ್ರಮುಖ ಬೆಳೆಗಳ ಪ್ರದರ್ಶನ ಹಾಗೂ ಮೀನುಗಾರಿಕೆ ಮತ್ತು ಮೀನು ಆಧಾರಿತ ಉದ್ಯಮಗಳ ಕುರಿತ ಮಾಹಿತಿಯೂ ಇರಲಿದೆ.
ರೈತರು ಹಾಗೂ ಕೃಷಿ ಉದ್ಯಮಿಗಳೊಂದಿಗೆ ನೇರ ಸಂವಾದ, ಕೃಷಿಯಲ್ಲಿ ಯಶಸ್ಸು ಸಾಧಿಸಿರುವವರ ಅನುಭವ ಹಂಚಿಕೆ, ತಜ್ಞರಿಂದ ತಾಂತ್ರಿಕ ಮಾಹಿತಿ, ಟೆರೇಸ್ ಗಾರ್ಡನಿಂಗ್, ಸಿರಿಧಾನ್ಯ ಮತ್ತು ಆರೋಗ್ಯಕರ ಆಹಾರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ. ಯುವಜನರನ್ನು ಕೃಷಿ ಮತ್ತು ಕೃಷಿ ಉದ್ಯಮದತ್ತ ಆಕರ್ಷಿಸಿ, ಕೃಷಿಯನ್ನು ಕೇವಲ ಜೀವನೋಪಾಯವಾಗಿರದೆ ಉದ್ಯಮ ಹಾಗೂ ಹವ್ಯಾಸವಾಗಿಯೂ ಬೆಳೆಸುವ ಉದ್ದೇಶದಿಂದ ಕೃಷಿ ಹಬ್ಬ ರೂಪಿಸಲಾಗಿದೆ ಎಂದು ಅಶ್ವಿನ್ ಸಿಕ್ವೇರಾ ತಿಳಿಸಿದರು.

ಕಾರ್ಯಕ್ರಮಕ್ಕೆ ಕೆಎಪೆಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಐವರಿ ಗ್ರಾಂಡ್, ಒಎನ್ಜಿಸಿ–ಎಂಆರ್ಪಿಎಲ್, ಹ್ಯಾಂಗ್ಯೋ ಐಸ್ಕ್ರೀಂ, ಜೈನ್ ಇರಿಗೇಷನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ (ಕೆಎಂಎಫ್ ನಂದಿನಿ), ಫಾಧರ್ ಮುಲ್ಲರ್ ಹಾಗೂ ಕ್ಯಾಂಪ್ಕೋ ಸೇರಿದಂತೆ ವಿವಿಧ ಸಂಸ್ಥೆಗಳು ಸಹಕಾರ ನೀಡುತ್ತಿವೆ.
ಪತ್ರಿಕಾಗೋಷ್ಠಿಯಲ್ಲಿ ರೋಟೇರಿಯನ್ ರಾಜೇಶ್ ಶೆಟ್ಟಿ, ರೋಟೇರಿಯನ್ ಜಾಕ್ಸನ್ ಸಲ್ಡಾನ್ಹಾ, ರಿಯಾನ್ ಮೋರಿಸ್, ರೋಟೇರಿಯನ್ ಭಾಸ್ಕರ ರೈ ಕಟ್ಟ ಹಾಗೂ ರೋಟೇರಿಯನ್ ಶೆಲ್ಡನ್ ಕ್ರಾಸ್ಟಾ ಉಪಸ್ಥಿತರಿದ್ದರು.

