ಮಂಗಳೂರು: ಮುಂಬೈಯ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ಪರ್ವದ ಅಂಗವಾಗಿ ಎರಡು ದಿನಗಳ ‘ಮುಂಬೈ ಯಕ್ಷಗಾನ ಸಮ್ಮೇಳನ–2026’ ಆಯೋಜಿಸಿದೆ. ಅಕ್ಟೋಬರ್ 3 ಮತ್ತು 4ರಂದು ಮುಂಬೈ ಕುರ್ಲಾದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಬಂಟರ ಭವನದಲ್ಲಿ ನಿರ್ಮಿಸಲಾಗುವ ದಿ. ಕಲ್ಲಾಡಿ ವಿಠಲ ಶೆಟ್ಟಿ ಪ್ರಾಂಗಣದಲ್ಲಿ ಸಮ್ಮೇಳನ ನಡೆಯಲಿದೆ ಎಂದು ಪ್ರಧಾನ ಸಂಚಾಲಕ ಭಾಸ್ಕರ್ ರೈ ಕುಕ್ಕುವಳ್ಳಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗುರು ಹಾಗೂ ಕಲಾ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಅಜೆಕಾರು ಕಲಾಭಿಮಾನಿ ಬಳಗವು ಯಕ್ಷಗಾನ ಶಿಕ್ಷಣ, ಪ್ರದರ್ಶನ, ಸರಣಿ ತಾಳಮದ್ದಳೆ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ಕಲಾವಿದರ ಸಮ್ಮಾನ ಹಾಗೂ ಗ್ರಂಥ ಪ್ರಕಟಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದರು. ಯಕ್ಷಗಾನ ಕಲಾಪೋಷಕ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಸಮ್ಮೇಳನಾಧ್ಯಕ್ಷರಾಗಿರುವರು ಎಂದು ಹೇಳಿದರು.

ಅಕ್ಟೋಬರ್ 3ರಂದು ಬೆಳಗ್ಗೆ ಯಕ್ಷಗಾನದ ‘ಕೇಳಿ’ ಬಾರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದ್ದು, ಮುಂಬೈನ ಖ್ಯಾತ ಭಾಗವತರಿಂದ ಯಕ್ಷಗಾಯನ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಹಾಗೂ ಅತಿಥಿ ಗಣ್ಯರನ್ನು ಛಂದೋಬ್ರಹ್ಮ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಸಭಾಂಗಣಕ್ಕೆ ಕರೆತರಲಾಗುವುದು. ಆರ್.ಕೆ. ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸಮ್ಮೇಳನವನ್ನು ಉದ್ಘಾಟಿಸುವರು.
ಸಮ್ಮೇಳನದ ಪ್ರಧಾನ ಸಂಪಾದಕರಾಗಿರುವ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದ ‘ಯಕ್ಷಗಾನ ಮುಂಬೆಳಗು’ ಸವಿ ಸಂಪುಟವನ್ನು ಹೇರಂಬ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಡಾ. ಕನ್ಯಾನ ಸದಾಶಿವ ಶೆಟ್ಟಿ ಬಿಡುಗಡೆಗೊಳಿಸುವರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿವಿಧ ಸಮಾಜಗಳ ಗಣ್ಯರು ಹಾಗೂ ಮಹನೀಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಮ್ಮೇಳನದಲ್ಲಿ ‘ಮುಂಬೈ ಯಕ್ಷಗಾನ–ಒಂದು ಅವಲೋಕನ’, ‘ಮಹಿಳಾ ಮತ್ತು ಮಕ್ಕಳ ಯಕ್ಷಗಾನ’, ‘ಅರ್ಥಗಾರಿಕೆ: ಸ್ವರೂಪ ಮತ್ತು ವಿಸ್ತರಣೆ’, ‘ಯಕ್ಷಗಾನ ಕವಿ ಸಮಯ’, ‘ತುಳುನಾಡಿನ ಆರಾಧನಾ ಕಲೆಗಳು’, ‘ಅಜೆಕಾರು ಬಳಗದ ಪ್ರಕಟಣೆಗಳ ಅವಲೋಕನ’, ‘ಯಕ್ಷಗಾನ ಹಾಸ್ಯ: ಅನ್ವಯ ಮತ್ತು ಪ್ರದರ್ಶನ’ ಹಾಗೂ ‘ಯಕ್ಷಗಾನ ಸಂಘಟನೆ ಮತ್ತು ಕಲಾವಿದರ ಕ್ಷೇಮ ಚಿಂತನೆ’ ಸೇರಿದಂತೆ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ. ಗೋಷ್ಠಿಗಳ ಮಧ್ಯಂತರದಲ್ಲಿ ವೈವಿಧ್ಯಮಯ ಯಕ್ಷಗಾನ ಪ್ರದರ್ಶನಗಳೂ ಜರುಗಲಿವೆ.
ಅಕ್ಟೋಬರ್ 4ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಸಮ್ಮೇಳನದ ಅವಲೋಕನ ನಡೆಸುವರು. ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಮ್ಮೇಳನಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಅವರನ್ನು ಸನ್ಮಾನಿಸಲಾಗುವುದು. ಗೌರವಾಧ್ಯಕ್ಷ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರು ಯಕ್ಷಗಾನ ರಂಗದ ಆಯ್ದ ಹಿರಿಯ ಸಾಧಕರಿಗೆ ‘ಯಕ್ಷರಕ್ಷಾ ಪ್ರಶಸ್ತಿ’ ಪ್ರದಾನ ಮಾಡುವರು.
ಸಮಾರೋಪದ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳ ಕಲಾವಿದರಿಂದ ‘ರುಕ್ಕಿಣಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪಟ್ಟ ಸತೀಶ್ ಶೆಟ್ಟಿ, ಭರತ್ ಶೆಟ್ಟಿ ಸಿದ್ಧಕಟ್ಟೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಶಾಂತ ಶೆಟ್ಟಿ ವಗೆನಾಡು, ರೋಹಿತ್ ಉಚ್ಚಿಲ್, ಹರಿಶ್ಚಂದ್ರ ಹಾಗೂ ಮಯೂರ್ ನಾಯಗ ಹಿಮ್ಮೇಳದಲ್ಲಿ ಭಾಗವಹಿಸುವರು. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮೊಗರು, ರವಿಶಂಕರ ವಳಕುಂಜ, ಮಹೇಶ್ ಮಣಿಯಾಣಿ, ದಿವಾಕರ ರೈ ಸಂಪಾಜೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಅವಿನಾಶ್ ಶೆಟ್ಟಿ ಉಬರಡ್ಕ, ಪ್ರಸಾದ್ ಸವಣೂರು, ಅಜಿತ್ ಪುತ್ತಿಗೆ ಹಾಗೂ ಗೋವಿಂದ ಸಫಲಿಗ ವೇಷಧಾರಿಗಳಾಗಿರುವರು.
ಸಮ್ಮೇಳನದ ಮಹಾದ್ವಾರ ಹಾಗೂ ಸಭಾಂಗಣದ ವಿವಿಧ ದ್ವಾರಗಳಿಗೆ ಅಗಲಿದ ಹಿರಿಯ ಕಲಾವಿದರಾದ ಅಳಿಕೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಹಾಗೂ ಮುಂಬೈ ಪದವೀಧರ ಯಕ್ಷಗಾನ ಸಂಘದ ಅಧ್ಯಕ್ಷ ದಿ. ಎಚ್.ಬಿ.ಎಲ್. ರಾವ್ ಅವರ ಹೆಸರುಗಳನ್ನು ಇಡಲಾಗಿದೆ.

ಸಮ್ಮೇಳನದ ಆವರಣದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಹೆಸರಿನ ‘ಜ್ಞಾನಾಂಗಣ’ ಪುಸ್ತಕ ಪ್ರದರ್ಶನ ವಿಭಾಗದಲ್ಲಿ ‘ಯಕ್ಷಗಾನ ಮುಂಬೆಳಗು’ ಸೇರಿದಂತೆ ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಯಕ್ಷಾಲೋಕ’, ಹರೀಶ್ ಶೆಟ್ಟಿ ಸೂಡ ಅವರ ‘ಯಕ್ಷ ಪಂಚೋಳಿ’, ಅಜೆಕಾರು ಕಲಾಭಿಮಾನಿ ಬಳಗದ ಎಲ್ಲ ಪ್ರಕಟಣೆಗಳು ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮುಂಬೈಯ ಕಲಾಪೋಷಕ ಶೇಖರ ಶೆಟ್ಟಿ ಇನ್ನ ಕಾಚೂರು ಅವರ ಹೆಸರಿನ ‘ಛಾಯಾಂಗಣ’ದಲ್ಲಿ ಯಕ್ಷಗಾನ ಕಲಾವಿದ ಹಾಗೂ ಛಾಯಾಚಿತ್ರಗ್ರಾಹಕ ಮನೋಹರ ಎಸ್. ಕುಂದರ್ ಬಡಾ ಎರ್ಮಾಳ್ ಅವರ ಅಪರೂಪದ ಯಕ್ಷ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ವಿದ್ವಾಂಸ ಹಾಗೂ ಪ್ರಧಾನ ಸಲಹೆಗಾರ ಡಾ. ಎಂ. ಪ್ರಭಾಕರ ಜೋಶಿ, ಪ್ರಮುಖರಾದ ಸುಂದರ ಶೆಟ್ಟಿ, ಸದಾಶಿವ ಆಳ್ವ ತಲಪಾಡಿ ಹಾಗೂ ನಾಗೇಶ್ ಕಲ್ಲೂರು ಉಪಸ್ಥಿತರಿದ್ದರು.

