‘ಎಂಕ್ಲೆನ ಪಿಲಿ–ನಮ್ಮ ಹುಲಿ’: ಬಣ್ಣದಾಚೆಗಿನ ಹುಲಿವೇಷದ ಕಥೆಯನ್ನು ತೆರೆದಿಡುವ ಸಾಕ್ಷ್ಯಚಿತ್ರದ ವಿಭಿನ್ನ ನೋಟ……..!

ನವರಾತ್ರಿ ಬಂತೆಂದರೆ ಸಾಕು ಮಂಗಳೂರಿನ ರಥ ಬೀದಿಗಳಲ್ಲಿ ತಾಸೆಯ ಸದ್ದು, ಕುಣಿಯುವ ಹುಲಿಗಳ ಘರ್ಜನೆ, ಬಣ್ಣಬಣ್ಣದ ವೇಷಗಳು, ಪ್ರಮುಖ ದೇವಾಲಯಗಳಲ್ಲಿ ಭಕ್ತಿ ಭಾವದಿಂದ ಆಚರಿಸುವ ಮಾರ್ಣಮಿ ಉತ್ಸವ ಎಲ್ಲವೂ ಕಣ್ಣಿಗೆ ತಂಪನ್ನು ನೀಡುತ್ತಾ, ಕಿವಿಗೆ ಇಂಪನ್ನು ನೀಡುತ್ತಾ, ಭಕ್ತಿಯ ಕಂಪನ್ನು ಸೂಸುತ್ತಾ ಇರುತ್ತದೆ. ಮಾರ್ಣಮಿ ಸಮಯದಲ್ಲಿ ಘರ್ಜರಿಸುವ ಹುಲಿಯ ಗತ್ತು ಇಡೀ ತೌಳವ ನಾಡಿಗೆ ಗೊತ್ತು. ಆದರೆ ಆ ಹುಲಿಯ ಬಣ್ಣದ ಹಿಂದೆ ಎಷ್ಟು ಪರಿಶ್ರಮವಿದೆ? ಒಂದು ಹುಲಿವೇಷ ರೂಪುಗೊಳ್ಳಲು ಎಷ್ಟು ಸಮಯ, ಶ್ರಮ ಮತ್ತು ಶಿಸ್ತು ಬೇಕಾಗುತ್ತದೆ? ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಕಲಾ ಪರಂಪರೆ ಕಾಲದ ಬದಲಾವಣೆಯೊಂದಿಗೆ ಹೇಗೆ ರೂಪಾಂತರಗೊಂಡಿದೆ? ಇಂತಹ ಪ್ರಶ್ನೆಗಳಿಗೆ ದೃಶ್ಯಗಳ ಮೂಲಕ ಉತ್ತರ ಹುಡುಕುವ ಪ್ರಯತ್ನವೇ ನಿರ್ದೇಶಕ ಶ್ರಿತಿಜ್ ಕಾಮತ್ ಅವರ ‘ಎಂಕ್ಲೆನ ಪಿಲಿ–ನಮ್ಮ ಹುಲಿ’.

ಹುಲಿವೇಷವನ್ನು ಕೇವಲ ನೃತ್ಯ ಅಥವಾ ಮನರಂಜನೆಯ ದೃಶ್ಯವಾಗಿ ನೋಡುವ ಸಾಮಾನ್ಯ ದೃಷ್ಟಿಕೋನದಿಂದ ಪ್ರೇಕ್ಷಕರನ್ನು ಹೊರತಂದು, ಅದರ ಹಿಂದಿರುವ ಸಂಸ್ಕೃತಿ, ಇತಿಹಾಸ, ಕಲಾವಿದರ ಪರಿಶ್ರಮ ಮತ್ತು ಭಾವನಾತ್ಮಕ ನಂಟಿನತ್ತ ಕರೆದೊಯ್ಯುವುದು ಚಿತ್ರದ ಪ್ರಮುಖ ಉದ್ದೇಶ. ಸುಮಾರು 45 ನಿಮಿಷಗಳ ಈ ಸಾಕ್ಷ್ಯಚಿತ್ರ, ಹುಲಿವೇಷದ ಸಿದ್ಧತೆಯಿಂದ ಹಿಡಿದು ಕಲಾವಿದರ ಅನುಭವದವರೆಗೆ ಹಲವು ಆಯಾಮಗಳನ್ನು ಅಧ್ಯಾಯಗಳ ರೂಪದಲ್ಲಿ ತೆರೆದಿಡುತ್ತದೆ.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಶ್ರಿತಿಜ್ ಕಾಮತ್ ಅವರಿಗೆ ತಮ್ಮ ಊರಿನ ಕಥೆಯನ್ನು ತಮ್ಮದೇ ದೃಷ್ಟಿಕೋನದಲ್ಲಿ ಹೇಳಬೇಕೆಂಬುದು ಬಹುಕಾಲದ ಕನಸು. ವೈಲ್ಡ್‌ಲೈಫ್ ಫಿಲ್ಮ್‌ಮೇಕರ್ ಆಗಿರುವ ಅವರ ಅನುಭವವೇ ಈ ಚಿತ್ರದ ವಿಶಿಷ್ಟತೆಯಲ್ಲೊಂದು. ಕಾಡಿನಲ್ಲಿ ಕಾಣುವ ನಿಜವಾದ ಹುಲಿ ಮತ್ತು ತುಳುನಾಡಿನ ಬೀದಿಗಳಲ್ಲಿ ಕಲಾವಿದನ ದೇಹದ ಮೇಲೆ ರೂಪುಗೊಳ್ಳುವ ಹುಲಿ—ಇವೆರಡರ ನಡುವೆ ಇರುವ ದೃಶ್ಯಾತ್ಮಕ ಹಾಗೂ ಸಾಂಸ್ಕೃತಿಕ ಸಂಬಂಧವನ್ನು ಚಿತ್ರ ಕಟ್ಟಿಕೊಡುತ್ತದೆ.

ಚಿತ್ರದ ಆರಂಭದಿಂದಲೇ ಹುಲಿವೇಷದ ಬಣ್ಣ, ರೇಖೆ, ದೇಹದ ಮೇಲಿನ ವಿನ್ಯಾಸ ಮತ್ತು ವೇಷದ ಸಿದ್ಧತೆಯ ಹಿಂದೆ ಇರುವ ಕೌಶಲ್ಯವನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತದೆ. ನಾವು ಬೀದಿಯಲ್ಲಿ ಕೆಲವೇ ಕ್ಷಣ ನೋಡುವ ಹುಲಿವೇಷದ ಹಿಂದೆ ಗಂಟೆಗಳ ಸಿದ್ಧತೆ, ದೈಹಿಕ ಪರಿಶ್ರಮ, ಶಿಸ್ತು ಮತ್ತು ಕಲಾವಿದನ ಸಮರ್ಪಣೆ ಅಡಗಿದೆ ಎಂಬುದು ಚಿತ್ರ ಮುಂದುವರಿದಂತೆ ಸ್ಪಷ್ಟವಾಗುತ್ತದೆ. ಇದೇ ಚಿತ್ರದ ಪ್ರಮುಖ ಯಶಸ್ಸು—ಈ ಹಿಂದೆ ಕೇವಲ ‘ನೋಡಿದ್ದ’ ಹುಲಿವೇಷವನ್ನು ‘ಅರ್ಥಮಾಡಿಕೊಳ್ಳುವಂತೆ’ ಮಾಡುವುದು.

ಸಾಕ್ಷ್ಯಚಿತ್ರದ ಪ್ರಮುಖ ಅಧ್ಯಾಯಗಳಲ್ಲಿ ಹಿರಿಯ ಹುಲಿವೇಷ ಕಲಾವಿದ ಬಜ್ಜಲಕೇರಿ ಕಮಲಾಕ್ಷ ಅವರ ಪರಂಪರೆಯ ದಾಖಲೆಯೂ ಗಮನ ಸೆಳೆಯುತ್ತದೆ. ಸುಮಾರು ಒಂದು ಶತಮಾನದತ್ತ ಸಾಗುತ್ತಿರುವ ತಂಡದ ಇತಿಹಾಸ, ಅದರ ವಿಶಿಷ್ಟ ನೃತ್ಯಶೈಲಿ ಮತ್ತು ತಲೆಮಾರುಗಳಿಂದ ಮುಂದುವರಿದು ಬಂದಿರುವ ಕಲಾ ಪರಂಪರೆಯನ್ನು ಚಿತ್ರ ಕ್ಯಾಮೆರಾ ದಾಖಲಿಸುತ್ತದೆ. ಇಲ್ಲಿ ಹುಲಿವೇಷ ಎನ್ನುವುದು ನವರಾತ್ರಿಯ ಕೆಲವು ದಿನಗಳ ಆಚರಣೆಯಷ್ಟೇ ಅಲ್ಲ; ಹಲವು ದಶಕಗಳ ನೆನಪು, ಅನುಭವ ಮತ್ತು ಕಲಾವಿದರ ಬದುಕಿನೊಂದಿಗೆ ಬೆಸೆದುಕೊಂಡಿರುವ ಪರಂಪರೆ ಎಂಬುದು ಮನದಟ್ಟಾಗುತ್ತದೆ.

ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಅದು ಕೇವಲ ಹುಲಿವೇಷ ಕಲಾವಿದರ ಕಥೆಯಾಗಿ ಉಳಿಯುವುದಿಲ್ಲ. ಹುಲಿವೇಷವನ್ನು ನೋಡುವ ಪ್ರೇಕ್ಷಕರ ದೃಷ್ಟಿಕೋನವನ್ನೂ ಒಳಗೊಂಡಿದೆ. ಬಾಲ್ಯದಿಂದ ಹುಲಿವೇಷವನ್ನು ನೋಡುತ್ತಾ ಬಂದವರಿಂದ ಹಿಡಿದು, ಮೊದಲ ಬಾರಿಗೆ ಅದರ ಹಿಂದಿನ ಕಥೆಯನ್ನು ಅರಿಯುವ ಯುವಜನರವರೆಗೆ ವಿವಿಧ ಅನುಭವಗಳು ಚಿತ್ರಕ್ಕೆ ಮತ್ತೊಂದು ಪದರವನ್ನು ನೀಡುತ್ತವೆ. ‘ಹುಲಿವೇಷ ಎಂದರೆ ಕುಣಿತ’ ಎಂಬ ಸರಳ ಕಲ್ಪನೆಯಾಚೆಗೆ ಅದರ ಹಿಂದೆ ಇರುವ ನೋವು, ಪರಿಶ್ರಮ, ಸಿದ್ಧತೆ ಮತ್ತು ಕಲಾವಿದರ ಸಮರ್ಪಣೆ ಪ್ರೇಕ್ಷಕರಿಗೆ ಹೊಸದಾಗಿ ಕಾಣಿಸಿಕೊಳ್ಳುತ್ತದೆ.

ದೃಶ್ಯಗಳ ವಿಚಾರದಲ್ಲಿ ಶ್ರೀಜಿತ್ ಕಾಮತ್ ಅವರ ವೈಲ್ಡ್‌ಲೈಫ್ ಫಿಲ್ಮ್‌ಮೇಕಿಂಗ್ ಅನುಭವ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಜವಾದ ಹುಲಿಯ ಚಲನೆ ಮತ್ತು ಹುಲಿವೇಷದ ಕಲಾವಿದನ ಚಲನೆಯನ್ನು ಸಮೀಪಿಸುವ ಕ್ಯಾಮೆರಾ ದೃಷ್ಟಿ ಚಿತ್ರಕ್ಕೆ ವಿಶಿಷ್ಟ ದೃಶ್ಯಭಾಷೆಯನ್ನು ನೀಡಿದೆ. ಹುಲಿಯ ವೈಲ್ಡ್‌ಲೈಫ್ ದೃಶ್ಯಗಳು ಮತ್ತು ಮಂಗಳೂರಿನ ಬೀದಿಗಳಲ್ಲಿನ ಹುಲಿವೇಷದ ದೃಶ್ಯಗಳ ನಡುವಿನ ಜೋಡಣೆ, ಚಿತ್ರದ ಮೂಲ ಪರಿಕಲ್ಪನೆಯನ್ನು ಕೇವಲ ಮಾತಿನಲ್ಲಲ್ಲದೆ ದೃಶ್ಯಗಳಲ್ಲಿಯೇ ಹೇಳುತ್ತದೆ.

ಚಿತ್ರದ ಅಧ್ಯಾಯಬದ್ಧ ನಿರೂಪಣೆ, ಛಾಯಾಗ್ರಹಣ, ಸಂಕಲನ ಮತ್ತು ಸಂಗೀತವೂ ಕಥನಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ತಾಸೆಯ ಸದ್ದು, ಹುಲಿವೇಷದ ಬಣ್ಣಗಳು, ಕಲಾವಿದರ ಚಲನೆ ಮತ್ತು ಕಾಡಿನ ಹುಲಿಯ ದೃಶ್ಯಗಳು ಸೇರಿ ಚಿತ್ರಕ್ಕೆ ತನ್ನದೇ ಆದ ವಾತಾವರಣವನ್ನು ನಿರ್ಮಿಸುತ್ತವೆ. ಮಾಹಿತಿಯನ್ನು ಒತ್ತಿ ಹೇಳುವುದಕ್ಕಿಂತ ದೃಶ್ಯಗಳ ಮೂಲಕ ಅನುಭವಿಸುವಂತೆ ಮಾಡುವ ಪ್ರಯತ್ನ ಇಲ್ಲಿ ಗಮನಾರ್ಹ.

ಪ್ರೇಕ್ಷಕರ ಪ್ರತಿಕ್ರಿಯೆಗಳಲ್ಲೂ ಚಿತ್ರದ ಈ ಪ್ರಯತ್ನ ಪ್ರತಿಫಲಿಸುತ್ತದೆ. ಹುಲಿವೇಷವನ್ನು ಬಾಲ್ಯದಿಂದ ನೋಡಿದವರಿಗೂ ಅದರ ಇತಿಹಾಸ, ಬಣ್ಣ ಹಚ್ಚುವ ವಿಧಾನ, ಕಲಾವಿದರ ಪರಿಶ್ರಮ ಮತ್ತು ಪರಂಪರೆಯ ಹಲವು ಅಂಶಗಳು ಹೊಸದಾಗಿ ಪರಿಚಯವಾಗುತ್ತವೆ. ವಿಶೇಷವಾಗಿ ಮುಂದಿನ ಪೀಳಿಗೆಗೆ ಹುಲಿವೇಷವನ್ನು ಕೇವಲ ಮನರಂಜನೆಯಾಗಿ ಅಲ್ಲದೆ ತುಳುನಾಡಿನ ಸಾಂಸ್ಕೃತಿಕ ಪರಂಪರೆಯಾಗಿ ಪರಿಚಯಿಸಬೇಕೆಂಬ ಸಂದೇಶ ಚಿತ್ರದಿಂದ ಹೊರಹೊಮ್ಮುತ್ತದೆ.

ಚಿತ್ರದ ತಾಂತ್ರಿಕ ತಂಡವೂ ಈ ಪ್ರಯತ್ನಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ನಿರ್ಮಾಪಕರಾಗಿ ಶ್ರೀಕಾಂತ್ ಕಾಮತ್ ಮತ್ತು ಶ್ರೇಯಾ ಕಾಮತ್, ನಿರ್ದೇಶನ ಶ್ರಿತಿಜ್ ಕಾಮತ್ , ಛಾಯಾಗ್ರಹಣ ಮಹೇಶ್ ಡಿ. ಪೈ, ಸಂಕಲನ ಗಣೇಶ್ ನೀರ್ಚಾಲ್, ನಿರೂಪಣೆ ಮೈಮ್ ರಾಮದಾಸ್, ಪ್ರೊಡಕ್ಷನ್ ಮ್ಯಾನೇಜರ್ ಶುಭ್ ರಾವ್, ಸಂಗೀತ ಕಾರ್ತಿಕ್ ಮುಲ್ಕಿ, ವಿಷುಯಲ್ ಎಫೆಕ್ಟ್ಸ್ ಶುಶ್ರತ್ ಭಟ್, ಅನಿಮೇಷನ್ ಯಶಸ್ ಬಿಎಸ್, ಉಪಶೀರ್ಷಿಕೆ ಸಮರ್ಥ ಎಂ, ಬಣ್ಣಗಾರಿಕೆ ನಿಖಿಲ್ ಕಾರಿಯಪ್ಪ ಹಾಗೂ ಪೋಸ್ಟರ್ ವಿನ್ಯಾಸ ಅಕುಲ್ ಕಿಶೋರ್ ಅವರ ಕೆಲಸ ಚಿತ್ರವನ್ನು ರೂಪಿಸಿದೆ.

ಒಟ್ಟಿನಲ್ಲಿ ‘ಎಂಕ್ಲೆನ ಪಿಲಿ–ನಮ್ಮ ಹುಲಿ’ ಹುಲಿವೇಷದ ಬಣ್ಣ ಮತ್ತು ಸಂಭ್ರಮದಾಚೆಗೆ ಹೋಗಿ, ಅದರೊಳಗೆ ಅಡಗಿರುವ ಒಂದು ಜೀವಂತ ಸಂಸ್ಕೃತಿಯ ಕಥೆಯನ್ನು ಹೇಳುವ ಪ್ರಯತ್ನ. ಕಾಡಿನ ಹುಲಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಕಣ್ಣು, ತುಳುನಾಡಿನ ಹುಲಿವೇಷದೊಳಗಿನ ಕಲೆಯನ್ನು ನೋಡುವ ದೃಷ್ಟಿಯೊಂದಿಗೆ ಬೆಸೆದುಕೊಂಡಾಗ ಹುಟ್ಟಿರುವ ಈ ಸಾಕ್ಷ್ಯಚಿತ್ರ, ಒಂದು ಸ್ಥಳೀಯ ಆಚರಣೆಯನ್ನು ದಾಖಲಿಸುವುದಕ್ಕಿಂತಲೂ ಅದರ ಹಿಂದಿನ ಜನರು, ನೆನಪುಗಳು ಮತ್ತು ಪರಂಪರೆಯನ್ನು ದಾಖಲಿಸುವ ಮಹತ್ವದ ಪ್ರಯತ್ನವಾಗಿ ಕಾಣಿಸುತ್ತದೆ.

ಹುಲಿವೇಷದ ಬಣ್ಣ ಮಾಸಬಹುದು, ತಾಸೆಯ ಸದ್ದು ನಿಲ್ಲಬಹುದು, ಆದರೆ ಅದರ ಹಿಂದೆ ಉಳಿಯುವ ಕಥೆ ಮುಂದಿನ ತಲೆಮಾರಿಗೆ ತಲುಪಬೇಕಾದರೆ ಇಂತಹ ದಾಖಲೀಕರಣ ಅಗತ್ಯ. ಆ ಅರ್ಥದಲ್ಲಿ ‘ಎಂಕ್ಲೆನ ಪಿಲಿ–ನಮ್ಮ ಹುಲಿ’ ತುಳುನಾಡಿನ ಒಂದು ಜೀವಂತ ಪರಂಪರೆಯನ್ನು ಪರದೆಯ ಮೇಲೆ ಉಳಿಸುವ ಸಾಂಸ್ಕೃತಿಕ ದಾಖಲೆ.

ಗಿರೀಶ್ ಪಿ ಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!