ಮಂಗಳೂರು,:ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ದಸರಾ ರಜೆ ವಿಚಾರವಾಗಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ನೀಡಿರುವ ಹೇಳಿಕೆಗಳಿಗೆ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಮುತಾಲಿಕ್ ಅವರೇ, ದಸರಾ ರಜೆ ವಿಚಾರವನ್ನು ಧಾರ್ಮಿಕ ಸಂಘರ್ಷದ ವಿಷಯವನ್ನಾಗಿ ಮಾಡುವ ಮೊದಲು, ಶಾಲೆಗಳ ಶೈಕ್ಷಣಿಕ ವೇಳಾಪಟ್ಟಿ, ಸರ್ಕಾರದ ನಿಯಮಗಳು ಮತ್ತು ಆಯಾ ಶಿಕ್ಷಣ ಮಂಡಳಿಗಳ ನಿಯಮಾವಳಿಗಳನ್ನು ತಿಳಿದುಕೊಳ್ಳಿ. ಶಾಲೆಗಳು ಯಾವ ರೀತಿ ರಜೆಗಳನ್ನು ನಿಗದಿಪಡಿಸುತ್ತವೆ ಎಂಬುದು ಕೇವಲ ಧರ್ಮದ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ” ಎಂದು ಆಲ್ವಿನ್ ಡಿಸೋಜ ಪಾನೀರ್ ಹೇಳಿದ್ದಾರೆ.

“ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವ. ಹಿಂದೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಶಿಸ್ತು ಮತ್ತು ಗುಣಮಟ್ಟದ ವಿದ್ಯಾಭ್ಯಾಸ ಸಿಗುತ್ತದೆ ಎಂಬ ಕಾರಣಕ್ಕಾಗಿಯೇ ಕಾನ್ವೆಂಟ್ ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಹಾಗಿದ್ದರೆ ಈ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಎಷ್ಟು ವಿದ್ಯಾರ್ಥಿಗಳು ಹಾಳಾಗಿದ್ದಾರೆ ಅಥವಾ ಎಷ್ಟು ಮಂದಿ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ಮುತಾಲಿಕ್ ಅವರು ಸ್ಪಷ್ಟ ಹಾಗೂ ಪರಿಶೀಲಿಸಬಹುದಾದ ದಾಖಲೆಗಳನ್ನು ಒದಗಿಸಲಿ” ಎಂದು ಅವರು ಸವಾಲು ಹಾಕಿದ್ದಾರೆ.

“ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲೇ ಸಂಸ್ಥೆಯ ನಿಯಮಾವಳಿಗಳನ್ನು ಸ್ಪಷ್ಟಪಡಿಸಲಾಗುತ್ತದೆ. ಶಾಲೆಗಳು ಶಿಕ್ಷಣ ಇಲಾಖೆ, ಶಿಕ್ಷಣ ಮಂಡಳಿ ಮತ್ತು ಅನ್ವಯಿಸುವ ಕಾನೂನು ಚೌಕಟ್ಟಿಗೆ ಒಳಪಟ್ಟೇ ಕಾರ್ಯನಿರ್ವಹಿಸುತ್ತವೆ. ಯಾವುದಾದರೂ ನಿರ್ದಿಷ್ಟ ಶಾಲೆ ನಿಯಮ ಉಲ್ಲಂಘಿಸಿದೆ ಎಂಬ ಆರೋಪವಿದ್ದರೆ, ಸಂಬಂಧಿಸಿದ ಇಲಾಖೆಗೆ ದಾಖಲೆಗಳೊಂದಿಗೆ ದೂರು ನೀಡಿ ಕಾನೂನುಬದ್ಧ ಕ್ರಮಕ್ಕೆ ಆಗ್ರಹಿಸಬೇಕು. ಅದನ್ನು ಬಿಟ್ಟು ಶಾಲೆಗಳ ಮುಂದೆ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡುವುದು ಸೂಕ್ತ ಮಾರ್ಗವಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಹಬ್ಬಗಳ ಕುರಿತು ಪದೇಪದೇ ಹೇಳಿಕೆಗಳನ್ನು ನೀಡುತ್ತಿರುವುದು ಹೊಸದೇನಲ್ಲ. ಆದರೆ, ಧರ್ಮದ ಆಧಾರದ ಮೇಲೆ ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಅನುಮಾನ ಹಾಗೂ ವೈಮನಸ್ಸು ಮೂಡಿಸುವ ಇಂತಹ ಹೇಳಿಕೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಸಮಾಜವನ್ನು ಒಗ್ಗೂಡಿಸುವ ಕೆಲಸ ಇಂದಿನ ತುರ್ತು ಅಗತ್ಯವಾಗಿದ್ದು, ಸಮಾಜವನ್ನು ವಿಭಜಿಸುವ ಇಂತಹ ಭಾಷಣಗಳನ್ನು ಅವರು ನಿಲ್ಲಿಸಬೇಕು” ಎಂದು ಕಿಡಿಕಾರಿದ್ದಾರೆ.
“ನಿಜಕ್ಕೂ ನಿಮ್ಮ ಸಮುದಾಯದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶವಿದ್ದರೆ ಶಿಕ್ಷಣ, ಉದ್ಯೋಗ, ಬಡವರ ಕಲ್ಯಾಣ, ಯುವಕರ ಭವಿಷ್ಯ, ಮಾದಕವಸ್ತು ನಿಯಂತ್ರಣ ಹಾಗೂ ಮಹಿಳಾ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ಕೆಲಸ ಮಾಡಲಿ. ಕೇವಲ ಒಂದು ಧರ್ಮದ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕವಾಗಿ ಸಂಘರ್ಷದ ವಾತಾವರಣ ನಿರ್ಮಿಸುವುದು ಸಮಾಜದ ಹಿತಕ್ಕೆ ಮಾರಕ” ಎಂದು ಆಲ್ವಿನ್ ಡಿಸೋಜ ಪಾನೀರ್ ಅಭಿಪ್ರಾಯಪಟ್ಟಿದ್ದಾರೆ.

“ಯಾವುದೇ ಶಾಲೆ ಸರ್ಕಾರದ ನಿಯಮ ಉಲ್ಲಂಘಿಸಿದ್ದರೆ ಶಿಕ್ಷಣ ಇಲಾಖೆ ತನಿಖೆ ನಡೆಸಲಿ, ತಪ್ಪು ಸಾಬೀತಾದರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಿ. ಅದೇ ರೀತಿ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಹ ಹೇಳಿಕೆಗಳು ಅಥವಾ ಕೃತ್ಯಗಳು ಕಂಡುಬಂದರೆ, ಗೃಹ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಮುತಾಲಿಕ್ ಅವರೇ, ಕ್ರೈಸ್ತ ವಿದ್ಯಾಸಂಸ್ಥೆಗಳ ವಿಚಾರಗಳಲ್ಲಿ ಮಾತಾಡಲು ತಾವು ಯಾರು? ಮೊದಲು ನಿಮ್ಮ ಸಮುದಾಯದ ಏಳಿಗೆಗಾಗಿ ಶ್ರಮಿಸಿರಿ. ಧರ್ಮದ ಹೆಸರು ಬಳಸಿ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಇನ್ನು ಮುಂದಾದರೂ ನಿಲ್ಲಿಸಿ. ಶಿಕ್ಷಣ ಸಂಸ್ಥೆಗಳ ಬಗ್ಗೆ ಆರೋಪಗಳಿದ್ದರೆ ದಾಖಲೆಗಳೊಂದಿಗೆ ಸರ್ಕಾರದ ಮುಂದಿಡಿ, ನಿಮ್ಮ ವಯಸ್ಸಿಗೆ ತಕ್ಕಂತೆ ಶಿಸ್ತಿನಿಂದ ವರ್ತಿಸಿ. ಕಾನೂನು ತನ್ನ ಕೆಲಸ ಮಾಡಲಿ. ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

