“ಹಳಗನ್ನಡ ಓದು ಮತ್ತು ವ್ಯಾಖ್ಯಾನ ” ರಾಷ್ಟ್ರೀಯ ಕಾರ್ಯಾಗಾರ ಸಮಾರೋಪ.

ಕೊಣಾಜೆ: ಹಳಗನ್ನಡ ಪದ್ಯಗಳ ಅರ್ಥ, ಅನ್ವಯ ಮತ್ತು ವ್ಯಾಖ್ಯಾನಕ್ಕೆ ಸಮರ್ಪಕವಾದ ಓದಿನ ಅಗತ್ಯವಿದೆ. ಹಳಗನ್ನಡ ಕಾವ್ಯಗಳ ಸಂದರ್ಭ ವಿವೇಚನೆ, ಪ್ರಾಯೋಗಿಕ ವಿಮರ್ಶೆ ಸೇರಿದಂತೆ ಇತರ ವಿಮರ್ಶಾ ವಿಧಾನಗಳಿಗೆ ಮತ್ತು ಆಧುನಿಕ ಕಾಲಘಟ್ಟಕ್ಕೆ ಹಳಗನ್ನಡವನ್ನು ಪ್ರಸ್ತುತಗೊಳಿಸಲು ತಜ್ಞ ಮತ್ತು ಶಿಸ್ತುಬದ್ಧ ಓದು ಇಂದಿನ ಅವಶ್ಯಕತೆಯಾಗಿದೆ. ಜೊತೆಗೆ ಹಳಗನ್ನಡ ಸಾಹಿತ್ಯವನ್ನು ದೃಶ್ಯ ಶ್ರವ್ಯಗಳ ಮೂಲಕ ಆರ್ಕೈವ್ ಮಾದರಿಯಲ್ಲಿ ದಾಖಲಿಸಿಡುವ ಕಾರ್ಯ ಆಗಬೇಕಿದೆ ಎಂದು ಜಾನಪದ ವಿದ್ವಾಂಸರಾದ ಪ್ರೊ.ಕೆ.ಚಿನ್ನಪ್ಪ ಗೌಡ ಹೇಳಿದರು.

ಅವರು    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಮತ್ತು ಮೈಸೂರು ವಿಭಾಗ ಹಾಗೂ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇದರ ಆಶ್ರಯದಲ್ಲಿ ಮಂಗಳೂರು  ವಿವಿ ಎಸ್ ವಿಪಿ ಕನ್ನಡ ಅಧ್ಯಯನ  ಸಂಸ್ಥೆಯ ಪ್ರೊ.ಬಿ.ಎ.ವಿವೇಕ ರೈ ವಿಚಾರ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆದ‌  "ಹಳಗನ್ನಡ ಓದು ಮತ್ತು ವ್ಯಾಖ್ಯಾನ " ರಾಷ್ಟ್ರೀಯ ಕಾರ್ಯಾಗಾದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಳಗನ್ನಡ ಪದ್ಯಗಳು ಚಾರಿತ್ರಿಕ ಕಾಲಘಟ್ಟದ ಕಿಟಿಕಿಗಳೂ ಹೌದು, ಆಯುಧ ಮತ್ತು ಕನ್ನಡಿಯೂ ಆಗಿರುವುದರಿಂದ ಇದರ ಓದನ್ನು ಸಮಕಾಲೀನಗೊಳಿಸುವ ಕೆಲಸವೂ ಆಗಬೇಕಾಗಿದೆ ಎಂದರು.

ಮಂಗಳೂರು ಕಲಾ‌ನಿಕಾಯದ ಡೀನ್ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಭಾಷೆ ಎಂದಿಗೂ ಅಳಿಯದು. ಭಾಷೆಗೆ ನಾಡಿನ ಗಡಿಯನ್ನೂ ಮೀರಿ ಬೆಳೆಯುವ ಶಕ್ತಿಯಿದೆ. ಹಳಗನ್ನಡ ವಿಷಯದಲ್ಲಿ ಎರಡು ದಿನಗಳ ಕಾಲ ನಡೆದ ಕಾರ್ಯಾಗಾರ ಮಹತ್ವದ್ದಾಗಿದೆ ಎಂದರು.
‌‌ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೆಶಕರಾದ ನಿರ್ಮಲಾ ಮಠಪತಿ,‌ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ,‌ ದ.ಕ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಾ.ಆನಂದ ಕಿದೂರು ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರದಲ್ಲಿ ಕನ್ನಡ ಕಾವ್ಯಗಳ‌ ಕುರಿತಾದ ಉಪನ್ಯಾಸ ಮತ್ತು ಚಿಂತನೆಗಳು ಸಾಗರದಾಚೆಗೆ ಬದುಕುತ್ತಿರುವ ನನಗೆ ಕನ್ನಡ ನಾಡಿನ ,ಕನ್ನಡ ಸಂಸ್ಕೃತಿಯ ನೆನೆಪುಗಳನ್ನು ಮರುಕಳಿಸುವಂತೆ ಮಾಡಿತು. ಹಾಗೂ ಹೊಸ ಆಲೋಚನೆಗಳ ಮೂಲಕ ಅರಿವು ವಿಸ್ತರಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!