ಮಂಗಳೂರು, ಅ.2: ಶಕ್ತಿನಗರದ ಸಾನಿಧ್ಯ ಸಮೂಹ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಪೋಷಕರ–ಶಿಕ್ಷಕರ ಸಭೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕದ್ರಿಯ ನ್ಯೂರೋನೋವಾ ಫಿಸಿಕಲ್ ರಿಹ್ಯಾಬಿಲಿಟೇಶನ್ ಸೆಂಟರ್‌ನ ಸಂಸ್ಥಾಪಕಿ ಡಾ. ವಿನಾಂತಿ ರೈ (PT), BPT, MPT (ಪೀಡಿಯಾಟ್ರಿಕ್ಸ್) ಭಾಗವಹಿಸಿ ದೀಪ ಪ್ರಜ್ವಲಿಸಿ ಮಾತನಾಡಿ, ವಿಶೇಷ ಅಗತ್ಯಗಳಿರುವ ಮಕ್ಕಳನ್ನು ಅವರ ವೈದ್ಯಕೀಯ ರೋಗನಿರ್ಣಯದ ಆಧಾರದಲ್ಲಿ ಗುರುತಿಸದೆ, ಅವರ ಸಾಮರ್ಥ್ಯ ಮತ್ತು ಸಾಧನೆಯ ಆಧಾರದಲ್ಲಿ ಬೆಳೆಸಬೇಕು. ಮಕ್ಕಳಿಗೆ ಭರವಸೆ ನೀಡುವುದನ್ನು ಎಂದಿಗೂ ನಿಲ್ಲಿಸಬಾರದು. ಸಣ್ಣ ಸಣ್ಣ ಗೆಲುವುಗಳನ್ನು ಗುರುತಿಸಿ, ಪ್ರತಿಯೊಂದು ಚಟುವಟಿಕೆಯಲ್ಲೂ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.

ಮಕ್ಕಳ ಬೆಳವಣಿಗೆಯಲ್ಲಿ ‘ಭಾಗವಹಿಸುವಿಕೆ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸ’ ಪ್ರಮುಖ ಗುರಿಗಳಾಗಬೇಕು. ಮಗು ಸ್ವತಃ ಊಟ ಮಾಡುವುದು, ಬಟ್ಟೆ ಧರಿಸಲು ಪ್ರಯತ್ನಿಸುವುದು, ಶೂ ಹಾಕಿಕೊಳ್ಳುವುದು, ಬ್ಯಾಗ್ ತೆಗೆದುಕೊಳ್ಳುವುದು ಸೇರಿದಂತೆ ಸಣ್ಣ ಚಟುವಟಿಕೆಗಳಲ್ಲೂ ಸ್ವತಂತ್ರವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. ಮಗುವಿಗೆ ಹೆಚ್ಚು ಸಮಯ ಬೇಕಾದರೂ, ಅದನ್ನು ಪೋಷಕರು ಸಹನೆಯಿಂದ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಣ್ಣ ಅವಕಾಶಗಳನ್ನು ನೀಡಬೇಕು. ‘ಹೌದು’ ಅಥವಾ ‘ಇಲ್ಲ’ ಎಂಬಂತಹ ಸರಳ ಆಯ್ಕೆಗಳ ಮೂಲಕವೂ ಅವರ ಸಂವಹನ ಮತ್ತು ನಿರ್ಧಾರ ಸಾಮರ್ಥ್ಯವನ್ನು ಬೆಳೆಸಬಹುದು. ಮನೆಯಿಂದಲೇ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿದಾಗ ಅದು ಮುಂದಿನ ಹಂತದಲ್ಲಿ ಸಾಮಾಜಿಕ ಏಕೀಕರಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಸಾನಿಧ್ಯ ವಸತಿ ಶಾಲೆ ಮತ್ತು ತರಬೇತಿ ಕೇಂದ್ರದ ಸ್ಥಾಪಕರು ಹಾಗೂ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ, ಸಾನಿಧ್ಯ ಸಂಸ್ಥೆ 25ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ಸಂಗತಿ ಎಂದರು. ಆಟಿಸಂ, ಡಿಸ್ಲೆಕ್ಸಿಯಾ ಹಾಗೂ ಕಲಿಕಾ ಅಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ವ್ಯವಸ್ಥಿತ ಶಿಕ್ಷಣ ಮತ್ತು ತರಬೇತಿ ನೀಡುವ ಸಂಸ್ಥೆಯಾಗಿ ಸಾನಿಧ್ಯವನ್ನು ಬೆಳೆಸುವ ಕನಸನ್ನು ಟ್ರಸ್ಟ್ ಹೊಂದಿದೆ ಎಂದರು .
ಸಾನಿಧ್ಯದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳ ವರ್ತನೆ ಹಾಗೂ ಅಗತ್ಯಗಳ ಕುರಿತು ಚರ್ಚಿಸಿ, ಸೂಕ್ತ ರೀತಿಯಲ್ಲಿ ನಿರ್ವಹಿಸುವ ಪ್ರಯತ್ನ ನಡೆಯುತ್ತಿದೆ. ಸಂಸ್ಥೆ ಇದುವರೆಗೆ ಮಾಡಿರುವ ಕಾರ್ಯಗಳ ಬಗ್ಗೆ ತೃಪ್ತಿ ಹೊಂದದೆ, ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಆಶಯದಿಂದ ಮುಂದುವರಿಯುತ್ತಿದೆ ಎಂದರು.
ವಿದೇಶದ ವಿಶೇಷ ಶಿಕ್ಷಣ ಕೇಂದ್ರಗಳ ಅಧ್ಯಯನದ ಅನುಭವ ಹಂಚಿಕೊಂಡ ಅವರು, ಮಕ್ಕಳಿಗೆ ಪ್ರತ್ಯೇಕವಾಗಿ ಸುಸಜ್ಜಿತ ಡೈನಿಂಗ್ ಹಾಲ್, ಅಡುಗೆಮನೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಇದೆ. ಬಾಲಕಿಯರಿಗೆ ಹೆಚ್ಚುವರಿ ಕೊಠಡಿಗಳು, ಮಕ್ಕಳಿಗೆ ವಿಶ್ರಾಂತಿ ಹಾಗೂ ಮನರಂಜನಾ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕನಸಿದೆ ಎಂದರು.

ಸಾನಿಧ್ಯದಲ್ಲಿ ಸುಮಾರು 110 ವಿದ್ಯಾರ್ಥಿಗಳು ವಸತಿ ಪಡೆಯುತ್ತಿದ್ದು, ಅವರ ಆರೈಕೆಗಾಗಿ 24 ಕೇರ್‌ಟೇಕರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. 25 ವರ್ಷ ಮೇಲ್ಪಟ್ಟ ಹಲವು ವಿದ್ಯಾರ್ಥಿಗಳ ಆರೈಕೆ ಮತ್ತು ಶಿಕ್ಷಣಕ್ಕೂ ನಿರಂತರವಾಗಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂಸ್ಥೆಗಳ ನಿರ್ವಹಣೆಗೆ ಸಮಾಜದ ಸಹಕಾರ ಅಗತ್ಯ ಎಂದು ವಸಂತ್ ಕುಮಾರ್ ಶೆಟ್ಟಿ ಹೇಳಿದರು.
ವಿಶೇಷ ಚೇತನ ಮಗುವಿನ ತಂದೆ ಅನಂತ್ ಕುಮಾರ್ ಮಾತನಾಡಿ, ಸಾನಿಧ್ಯದಲ್ಲಿ ಈ ಮಕ್ಕಳಿಗೆ ಅಗತ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈಜುಕೊಳ, ಸಂವಾದಾತ್ಮಕ ಕಲಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ದಾನಿಗಳ ನೆರವು ಪಡೆಯಲು ಆಡಳಿತ ಮಂಡಳಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಸಾನಿಧ್ಯದ ಪ್ರಮುಖ ಶಕ್ತಿ ಅದರ ಮೂಲಸೌಕರ್ಯ ಮಾತ್ರವಲ್ಲ, ಶಿಕ್ಷಕರ ಸಮರ್ಪಣಾ ಮನೋಭಾವವೂ ಆಗಿದೆ. ಮಕ್ಕಳ ಅಭಿವೃದ್ಧಿಗಾಗಿ ಶಿಕ್ಷಕರು ಮತ್ತು ಸಿಬ್ಬಂದಿ ತೋರಿಸುತ್ತಿರುವ ಬದ್ಧತೆ ಶ್ಲಾಘನೀಯ. ವಿಶೇಷ ಅಗತ್ಯಗಳಿರುವ ಮಕ್ಕಳ ಪೋಷಕರು ಪರಸ್ಪರ ಹೆಚ್ಚು ಭೇಟಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಪೋಷಕರು ಹಾಗೂ ಸಂಸ್ಥೆ ಒಟ್ಟಾಗಿ ಚಿಂತಿಸಬೇಕು ಎಂದು ಹೇಳಿದರು.
ವಿಶೇಷ ಚೇತನ ಮಗುವಿನ ತಾಯಿ ದಿವ್ಯಾ ಗೋಕುಲ್ ಮಾತನಾಡಿ, ಸಾನಿಧ್ಯದಲ್ಲಿ ವಿಶೇಷ ಅಗತ್ಯಗಳಿರುವ ಮಕ್ಕಳಿಗಾಗಿ ಶಿಕ್ಷಣದ ಜತೆಗೆ ಈಜು, ಸಂಗೀತ, ನೃತ್ಯ, ಕಲೆ ಮತ್ತು ಕರಕುಶಲ ಹಾಗೂ ವಿವಿಧ ವೃತ್ತಿಪರ ತರಬೇತಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿರುವುದು ಗಮನಾರ್ಹ ಎಂದರು. ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ ಅವರ ಪ್ರತಿಭೆಗೆ ಮಾನ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಾನಿಧ್ಯದ ಶಿಕ್ಷಕರು, ಕೇರ್‌ಟೇಕರ್‌ಗಳು ಹಾಗೂ ಸಿಬ್ಬಂದಿಯ ನಡುವೆ ಉತ್ತಮ ಸಮನ್ವಯವಿದ್ದು, ಮಕ್ಕಳ ಆರೈಕೆಯಲ್ಲಿ ತಾಳ್ಮೆ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶೌಚಾಲಯ ತರಬೇತಿ, ಊಟ, ಸ್ವಚ್ಛತೆ ಸೇರಿದಂತೆ ದೈನಂದಿನ ಚಟುವಟಿಕೆಗಳಲ್ಲಿ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ವಿಶೇಷ ಗಮನ ನೀಡಲಾಗುತ್ತಿದೆ. ಊಟದ ಸಮಯದಲ್ಲಿ ಸ್ವತಂತ್ರವಾಗಿ ಊಟ ಮಾಡುವ ಮಕ್ಕಳಿಗೆ ಸ್ವತಂತ್ರವಾಗಿ ಅವಕಾಶ ನೀಡಿ, ಸಹಾಯ ಅಗತ್ಯವಿರುವ ಮಕ್ಕಳಿಗೆ ಸಿಬ್ಬಂದಿಯ ಮೂಲಕ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಪ್ರಮುಖರಾದ ಉಷಾ ವಿ. ಎಸ್ ಶೆಟ್ಟಿ, ವಿಜಯ ಸುಧೀರ್ ಶೆಟ್ಟಿ, ದಿವ್ಯಾ ಡಿ ಬಾಳಿಗ, ಲ /ಎರಿಕ್ ಜಾನ್ ಬ್ಯಾಪ್ಟಿಸ್ಟ್ ಡಿಸೋಜಾ ಉಪಸ್ಥಿತರಿದ್ದರು. ಸಾನಿಧ್ಯ ಸಂಸ್ಥೆಯ ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ವಂದಿಸಿದರು.ಸುಮಾ ಡಿ. ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.


I’m really impressed with the fair play and the transparency of the odds here. It feels much safer than other places I’ve tried. Glad I found vnsc887