ವಿದ್ಯಾನಗರದಲ್ಲಿ ಭಾರಿ ಮನೆಗಳ್ಳತನ: ಇಬ್ಬರು ಆರೋಪಿಗಳ ಬಂಧನ

​ಕಾಸರಗೋಡು : ವಿದ್ಯಾ ನಗರದಲ್ಲಿ ಭಾರಿ ಮನೆಗಳ್ಳತನ ಎಸಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಪಳ್ಳಿಕ್ಕೆರೆಯ ರತೀಶ್ ಟಿ.ಎಫ್ (36) ಹಾಗೂ ಕರುಣಾಕರನ್ ಕೆ.ಎ (64) ಬಂಧಿತ ಖದೀಮರು.

​ತೆಕ್ಕಿಲ್ ಬೇವಿಂಜೆಯ ಎಂ.ಟಿ. ಅಬ್ದುಲ್ ಕಬೀರ್ ಎಂಬವರ ನಿರ್ಮಾಣ ಹಂತದಲ್ಲಿದ್ದ ಮನೆಯಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಯರ್ ಹಾಗೂ ಕೇಬಲ್‌ಗಳನ್ನು ಸೆಪ್ಟೆಂಬರ್ 17-18ರ ಅವಧಿಯಲ್ಲಿ ಕಳವು ಮಾಡಲಾಗಿತ್ತು.

ದೂರಿನನ್ವಯ ಕಾರ್ಯಪ್ರವೃತ್ತರಾದ ವಿದ್ಯಾ ನಗರ ಠಾಣೆಯ ಎಸ್‌ಐ ವಿಜಯನ್ ಮೇಲೋತ್ತ ನೇತೃತ್ವದ ತಂಡ ಇಬ್ಬರನ್ನೂ ಹೆಡೆಮುರಿಕಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಹರೀಶ್ ಮತ್ತು ಪ್ರಜಿತ್ ಸಾಥ್ ನೀಡಿದ್ದರು.

​ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಬಂಧಿತರ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆಯಲ್ಲೂ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!