ಕಾಸರಗೋಡು: ಖ್ಯಾತ ಯುವ ಕವಿ ಹಾಗೂ ಸಾಹಿತ್ಯಾಸಕ್ತ ಎಂ.ಎ. ಮುಸ್ತಫಾ ಬೆಳ್ಳಾರೆ ಅವರನ್ನು 2026ನೇ ಸಾಲಿನ ‘ಕಾಸರಗೋಡು ದಸರಾ ಕವಿಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026’ರ ಅಂಗವಾಗಿ ಅಕ್ಟೋಬರ್ 18ರಂದು ಬೆಳಿಗ್ಗೆ 11 ಗಂಟೆಗೆ ‘ಕಾಸರಗೋಡು ದಸರಾ ಕವಿ ಸಮ್ಮೇಳನ’ ನಡೆಯಲಿದೆ. ಈ ಸಂದರ್ಭದಲ್ಲಿ ಎಂ.ಎ. ಮುಸ್ತಫಾ ಬೆಳ್ಳಾರೆ ಅವರಿಗೆ ‘ಕಾಸರಗೋಡು ದಸರಾ ಕವಿಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕವಿ ಸಮ್ಮೇಳನವನ್ನು ಚುಟುಕು ಬ್ರಹ್ಮ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಮೈಸೂರು ಉದ್ಘಾಟಿಸಲಿದ್ದಾರೆ. ಮೈಸೂರಿನ ಖ್ಯಾತ ಕವಿ, ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ (ಜಯ ಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.
ರಾಷ್ಟ್ರಮಟ್ಟದ 75 ಮಂದಿ ಕವಿಗಳು ಭಾಗವಹಿಸಲಿರುವ ಈ ಕವಿ ಸಮ್ಮೇಳನದಲ್ಲಿ 21 ಮಂದಿ ಕವಿಗಳಿಗೆ ‘ಕಾಸರಗೋಡು ದಸರಾ ಕವಿಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026’ ನೀಡಿ ಗೌರವಿಸಲಾಗುವುದು.

ಈ ಕುರಿತು ಕಾಸರಗೋಡು ದಸರಾ ಸಂಚಾಲಕ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


