ಕಾಸರಗೋಡು: ಬೆಂಗಳೂರು ದೂರದರ್ಶನದ ಕವಯತ್ರಿ, ಸಾಹಿತಿ, ನಿರೂಪಕಿ ಹಾಗೂ ಬಹುಮುಖ ಪ್ರತಿಭೆ ಗೊರೂರು ಪಂಕಜ ಹಾಸನ್ ಅವರಿಗೆ ಕನ್ನಡ ಭವನದ ಪ್ರತಿಷ್ಠಿತ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ.

ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅಕ್ಟೋಬರ್ 18ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ದಸರಾ ಕವಿ ಸಮ್ಮೇಳನ ನಡೆಯಲಿದೆ.

ಅಖಿಲ ಕರ್ನಾಟಕ ಖ್ಯಾತಿಯ ಸಂಘಟಕ ಶ್ರೀನಿವಾಸ್ ಬಹದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಚುಟುಕು ಸಾಹಿತ್ಯ ಪರಿಷತ್ ಮೈಸೂರು ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಉದ್ಘಾಟಿಸಲಿದ್ದಾರೆ. ರಾಜ್ಯಮಟ್ಟದ ಮೇರು ಕವಿ, ಸಂಘಟಕ ಹಾಗೂ ಸಾಹಿತಿ ಡಾ. ಜಯಪ್ಪ ಹೊನ್ನಾಳಿ (ಜಯಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.
ಈ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಗೊರೂರು ಪಂಕಜ ಹಾಸನ್ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’ ಪ್ರದಾನ ಮಾಡಲಾಗುವುದು ಎಂದು ಕಾಸರಗೋಡು ದಸರಾ ಪ್ರಧಾನ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪ್ರವೀಣ್ ನಾಯ್ಕ್ ಪಾಂಗೋಡು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

