ಅಂಬಿತಾಡಿ: ನೂರಾರು ವಾಹನಗಳು ಹಾಗೂ ದಾರಿಹೋಕರು ಸಂಚರಿಸುವ ಅಂಬಿತಾಡಿ–ಗೇರುಕಟ್ಟೆ ರಸ್ತೆಯಲ್ಲಿರುವ ತೋಡನ್ನು ಕಸದ ತೊಟ್ಟಿಯಂತೆ ಬಳಸಲಾಗುತ್ತಿದ್ದು, ಸ್ಥಳೀಯ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಸಂಚರಿಸುವವರು ಕೂಡ ನಿರ್ಬಂಧವಿಲ್ಲದೆ ಕಸವನ್ನು ಬಿಸಾಡುತ್ತಿರುವುದು ಕಂಡುಬಂದಿದೆ. ಇದಲ್ಲದೆ, ವೈದ್ಯಕೀಯ ತ್ಯಾಜ್ಯವನ್ನು ಕೂಡ ಇಲ್ಲಿ ಎಸೆಯಲಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಇದೀಗ ತೋಡು ಕಸ ತ್ಯಾಜ್ಯದಿಂದ ತುಂಬಿ ತೋಡು ಕಣ್ಮರೆಯಾಗುವ ಸ್ಥಿತಿ ತಲುಪಿದೆ
ಇನ್ನೂ ಒಂದು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿರುವುದರಿಂದ, ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದೆ ಕೃತಕ ನೆರೆ ಸೃಷ್ಟಿಯಾಗಿ ಇಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳು ಮನೆಗಳೊಳಗೆ ನುಗ್ಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತ್ಯಾಜ್ಯದಿಂದ ಹೊರಹೊಮ್ಮುವ ಕಲುಷಿತ ನೀರು ಸಮೀಪದಲ್ಲಿರುವ ಸಾರ್ವಜನಿಕರಿಗೆ ಕುಡಿಯುವ ನೀರುಗೂ ಬರ ಉಂಟಾಗುವ ಅಪಾಯವೂ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ,
ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಸಮಸ್ಯೆಯನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.