ಕುಂಬಳೆ: ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಮತ್ತು ಪೆರಿಯಡ್ಕದ ವರ್ಕ್‌ಶಾಪ್‌ನಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ, ಬದಿಯಡ್ಕದಲ್ಲೂ ಕಿಡಿಗೇಡಿಗಳು ಬೆಂಕಿಯಾಟವಾಡಿದ್ದಾರೆ.ಬದಿಯಡ್ಕ ಪೊಲೀಸ್ ಠಾಣಾ ಸಮೀಪ ಜಿ.ಮಹಮ್ಮದ್ ಕಾಂತಿಲ ಎಂಬುವರಿಗೆ ಸೇರಿದ ಸೌದೆ ಡಿಪೋ ಹಾಗೂ ಗೋದಾಮಿಗೆ ಬೆಂಕಿ ಇಡಲಾಗಿದೆ.

ಘಟನೆಯಲ್ಲಿ ಗೋದಾಮಿನಲ್ಲಿದ್ದ ರೂ.10 ಲಕ್ಷ ಮೌಲ್ಯದ ಸೆಣಬಿನ ಚೀಲಗಳು, ಗೂಡ್ಸ್ ಆಟೋ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಸೌದೆ ಉರಿದು ಭಸ್ಮವಾಗಿದೆ.

ಇಂದು ಭಾನುವಾರ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದ್ದು, ಬೆಂಕಿ ವ್ಯಾಪಿಸುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಕಾಸರಗೋಡಿನಿಂದ ಬಂದ ಎರಡು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದವು.ಬೆಂಕಿ ಹಚ್ಚಿದ ಶಂಕಿತ ವ್ಯಕ್ತಿಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

