ಎಂಆರ್‌ಪಿಎಲ್‌ ಅವಘಡ: ಸುರಕ್ಷತಾ ಲೋಪದ ಬಗ್ಗೆ ಸಮಗ್ರ ತನಿಖೆಯಾಗಲಿ

ಮಂಗಳೂರು, ಅ.6: ಎಂಆರ್‌ಪಿಎಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಘಟನೆಯ ಹಿಂದಿರುವ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಇದು ಕೇವಲ ಎಂಆರ್‌ಪಿಎಲ್‌ ಸಂಸ್ಥೆಯೊಳಗಿನ ಸಮಸ್ಯೆಯಲ್ಲ; ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರ ಎಂದು ಎಂಆರ್‌ಪಿಎಲ್‌ ಮಜ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ, ಸಾಫ್ಟ್‌ವೇರ್ ಕಂಪನಿಗಳ ಸ್ಥಾಪನೆ ಹಾಗೂ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿರುವ ಪ್ರತಿಷ್ಠಿತ ಎಂಆರ್‌ಪಿಎಲ್‌ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಎಂಆರ್‌ಪಿಎಲ್‌ ಅನ್ನು ‘ಜೀವಂತ ಜ್ವಾಲಾಮುಖಿ’ಯಂತೆ ಮಡಿಲಲ್ಲಿ ಇಟ್ಟುಕೊಂಡು ಜನರು ಬದುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂತಹ ಕೈಗಾರಿಕಾ ಘಟಕಗಳಲ್ಲಿ ಸುರಕ್ಷತೆ ಹಾಗೂ ಜನರ ಜೀವದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಘಟನೆಯ ಬಳಿಕ ಮೃತ ಕಾರ್ಮಿಕ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಘಟನೆಯಲ್ಲಿ ಒಟ್ಟು ₹1.20 ಕೋಟಿ ಪರಿಹಾರ ಒದಗಿಸಿರುವುದನ್ನು ಸ್ವಾಗತಿಸಿದ ಅವರು, ಎಂಆರ್‌ಪಿಎಲ್‌ನಿಂದ ₹90 ಲಕ್ಷ, ವಿಮೆಯಿಂದ ₹10 ಲಕ್ಷ ಹಾಗೂ ಇತರ ಮೂಲಗಳಿಂದ ₹20 ಲಕ್ಷ ಸೇರಿ ಈ ಮೊತ್ತ ನೀಡಲಾಗಿದೆ ಎಂದು ತಿಳಿಸಿದರು. ಹಣದಿಂದ ಕಳೆದುಕೊಂಡ ಜೀವವನ್ನು ಮರಳಿ ತರಲು ಸಾಧ್ಯವಿಲ್ಲವಾದರೂ, ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ವಿಮೆ

ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರಿಗೆ ಆರೋಗ್ಯ ಭದ್ರತೆ ಒದಗಿಸುವ ವಿಚಾರದಲ್ಲಿ ಸಂಸ್ಥೆ ಹೆಚ್ಚಿನ ಗಮನ ಹರಿಸಬೇಕು. ಕನಿಷ್ಠ ₹10 ಲಕ್ಷದ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಒದಗಿಸಬೇಕು. ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ನೀಡಲಾಗುವ ₹10 ಲಕ್ಷ ವಿಮಾ ಮೊತ್ತವನ್ನು ಕನಿಷ್ಠ ₹25 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಗುತ್ತಿಗೆ ಕಾರ್ಮಿಕರು ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಮಾಹಿತಿ ಹಾಗೂ ಆಸ್ಪತ್ರೆಯ ದಾಖಲೆಗಳನ್ನು ನೀಡಿದರೂ ಕೆಲವರಿಗೆ ಉದ್ಯೋಗದಿಂದ ವಜಾಗೊಳಿಸುವ ಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಈ ಕುರಿತು ಸಂಸ್ಥೆ ಪರಿಶೀಲನೆ ನಡೆಸಬೇಕು ಎಂದರು.

ಗುತ್ತಿಗೆ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವರ ಸಂಘಟನೆಯೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು. ಕೇವಲ ಪ್ರಮುಖ ಯೂನಿಯನ್‌ಗಳೊಂದಿಗೆ ಮಾತ್ರ ಚರ್ಚೆ ನಡೆಸಿ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳನ್ನು ಕಡೆಗಣಿಸಬಾರದು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ಸುರಕ್ಷತಾ ವ್ಯವಸ್ಥೆ ಬಲಪಡಿಸಲು ಒತ್ತಾಯ

ಎಂಆರ್‌ಪಿಎಲ್‌ನಲ್ಲಿ ಸುರಕ್ಷತಾ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೈಗಾರಿಕಾ ಘಟಕಗಳಲ್ಲಿ ಒತ್ತಡ ಹೆಚ್ಚಾದಾಗ ಅಥವಾ ಅನಿಲ ಸೋರಿಕೆ ಸೇರಿದಂತೆ ಅಪಾಯಕಾರಿ ಪರಿಸ್ಥಿತಿ ಉಂಟಾದಾಗ ತಕ್ಷಣ ಎಚ್ಚರಿಕೆ ನೀಡುವ ಸೈರನ್ ಹಾಗೂ ಡಿಟೆಕ್ಷನ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕೆಲವು ಸಂದರ್ಭಗಳಲ್ಲಿ ಅನಗತ್ಯವಾಗಿ ಸೈರನ್ ಮೊಳಗುವುದರಿಂದ ಆತಂಕ ಉಂಟಾಗುತ್ತದೆ ಎಂಬ ಕಾರಣಕ್ಕೆ ಸೈರನ್ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ ಎಂಬ ಮಾಹಿತಿ ಇದೆ. ಇಂತಹ ವ್ಯವಸ್ಥೆ ಇಲ್ಲದಿರುವುದು ಅಪಾಯಕಾರಿ. ಸೈರನ್ ಮೊಳಗಿದರೆ ಕಾರ್ಮಿಕರನ್ನು ತಕ್ಷಣ ಅಪಾಯದ ಪ್ರದೇಶದಿಂದ ದೂರವಿರಿಸಲು ಸಾಧ್ಯವಾಗುತ್ತದೆ. ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅದನ್ನು ತೆಗೆದುಹಾಕುವುದು ಸರಿಯಲ್ಲ ಎಂದು ಅವರು ಹೇಳಿದರು.

ಈ ಹಿಂದೆ ಇಬ್ಬರು ನೇರ ಉದ್ಯೋಗಿಗಳು ಕೂಡ ಇಂತಹ ಅವಘಡಗಳಲ್ಲಿ ಮೃತಪಟ್ಟಿರುವುದನ್ನು ಉಲ್ಲೇಖಿಸಿದ ಅವರು, ಅಪಾಯಕಾರಿ ಪರಿಸ್ಥಿತಿಯನ್ನು ಮೊದಲ ಹಂತದಲ್ಲೇ ಪತ್ತೆಹಚ್ಚುವ ವ್ಯವಸ್ಥೆ, ಎಚ್ಚರಿಕೆ ಸೈರನ್ ಹಾಗೂ ತುರ್ತು ಸ್ಥಳಾಂತರ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಹಿತಾಸಕ್ತಿಯ ಹೋರಾಟ

ಎಂಆರ್‌ಪಿಎಲ್‌ ಸಮಸ್ಯೆಯನ್ನು ಯಾವುದೇ ಒಂದು ಸಂಘಟನೆ ಅಥವಾ ಕಾರ್ಮಿಕರ ಸಮಸ್ಯೆಯಾಗಿ ಮಾತ್ರ ನೋಡದೆ, ಜಿಲ್ಲೆಯ ಹಿತಾಸಕ್ತಿಯ ವಿಚಾರವಾಗಿ ಪರಿಗಣಿಸಬೇಕು. ಜಾತಿ, ಮತ, ಧರ್ಮ, ಪಂಥ, ಪಕ್ಷದ ಭೇದ ಮರೆತು ಜಿಲ್ಲೆಯ ಭವಿಷ್ಯಕ್ಕಾಗಿ ಹೋರಾಟ ರೂಪಿಸುವ ಉದ್ದೇಶವಿದೆ ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಹಾಗೂ ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ. ಎತ್ತಿನಹೊಳೆ ಹೋರಾಟದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಒಗ್ಗೂಡಿದ ರೀತಿಯಲ್ಲೇ ಈ ವಿಚಾರದಲ್ಲೂ ಜಿಲ್ಲೆಯ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಮನೀಶ್ ಕರ್ಕೇರ ಕುಟುಂಬಕ್ಕೆ ಪರಿಹಾರ, ಕಾರ್ಮಿಕರಿಗೆ ಆರೋಗ್ಯ ವಿಮೆ ಹಾಗೂ ಸುರಕ್ಷತಾ ವ್ಯವಸ್ಥೆ ಬಲಪಡಿಸುವುದರ ಜತೆಗೆ ಎಂಆರ್‌ಪಿಎಲ್‌ನಲ್ಲಿ ನಡೆದಿರುವ ಅವಘಡಗಳ ಕುರಿತು ಸಮಗ್ರ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಸಂಚಾಲಕ ಶಶಿರಾಜ್ ಶೆಟ್ಟಿ ಕೊಳಂಬೆ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ತುಷಾರ್ ಕದ್ರಿ, ತುಳುನಾಡು ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಸೇರಿದಂತೆ ಅಮರ್ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!