
ಮಂಗಳೂರು: ಶ್ರೀ ನಾರಾಯಣ ಗುರು ವಿಚಾರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವಿಧ ತಾಲೂಕು ಸಮಿತಿಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.11ರಂದು ಬೆಳಗ್ಗೆ 10 ಗಂಟೆಗೆ ನಗರದ ಪಂಪ್ವೆಲ್ ಬಳಿಯ ಕಪಿತಾನಿಯೋದಲ್ಲಿರುವ ಸುಮುಖ ಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಳೆದ ಒಂದೂವರೆ ತಿಂಗಳಲ್ಲಿ ಹಲವು ಸಭೆಗಳನ್ನು ನಡೆಸಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಬಳಿಕ ಮಂಗಳೂರು ದಕ್ಷಿಣ, ಉಳ್ಳಾಲ, ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕು ಸಮಿತಿಗಳನ್ನು ರಚಿಸಲಾಗಿದೆ. ಅ.11ರಂದು ನವರಾತ್ರಿಯ ಶುಭ ಮುಹೂರ್ತದಲ್ಲಿ ಗುರುಪೂಜೆಯೊಂದಿಗೆ ಜಿಲ್ಲಾ ಹಾಗೂ ತಾಲೂಕು ನಿಯೋಜಿತ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು.
ಬೆಳಗಾಂ ಮಹಾಕಾಳಿ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಗರೋಡಿ ಉದ್ಘಾಟಿಸುವರು. ಸತ್ಯಜಿತ್ ಸುರತ್ಕಲ್ ಅಧ್ಯಕ್ಷತೆ ವಹಿಸುವರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಬಂದಲೆ ಶ್ರೀಮಂತ ರಾಜಗುಳಿಗ ಕ್ಷೇತ್ರ ಮೂಡುಮನೆ ಗುತ್ತು ಧರ್ಮದರ್ಶಿ ಸತೀಶ್ ಪೂಜಾರಿ ಬಂದಲೆ, ಗೆಜ್ಜೆಗಿರಿ ದೇಯಿ ಬೈದೈತಿ ಕೋಟಿಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ನಟರಾದ ಅರ್ಜುನ್ ದೇವ್, ಅನುಪ್ ಸಾಗರ್, ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುಡಬ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹೊದಲ ಶಿವು, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕಡೇಂಜ, ಮೂಡುಬಿದಿರೆ ಅಧ್ಯಕ್ಷ ನವೀನ್ಚಂದ್ರ ಕರ್ಕೇರ, ಕಂಕನಾಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಶೇಖರ್ ಅಮೀನ್ ಹಾಗೂ ವೇದಿಕೆಯ ರಾಜ್ಯ ಪ್ರಚಾರ ಪ್ರಮುಖ್ ಸಂದೀಪ್ ಪೂಜಾರಿ ಪಂಪ್ವೆಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕುಲಗುರುಗಳಾಗಿ ಸ್ವೀಕರಿಸಿ, ಅವರ ತತ್ವ, ಆದರ್ಶಗಳಡಿ ಬದುಕುತ್ತಿರುವ ಬಿಲ್ಲವ, ತೀಯ, ಈಡಿಗ, ನಾಮಧಾರಿ, ದೀವರು ಸೇರಿದಂತೆ 26 ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ವೇದಿಕೆ ಸ್ಥಾಪನೆಯಾಗಿದೆ. ಸಮಾಜವನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಿಷ್ಠಗೊಳಿಸುವುದು ಮತ್ತು ಸಮಾಜಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಸವಲತ್ತು ಹಾಗೂ ಸೌಲಭ್ಯಗಳಿಗಾಗಿ ಹೋರಾಟ ನಡೆಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಲವು ಯಶಸ್ವಿ ಹೋರಾಟಗಳನ್ನು ಸಂಘಟಿಸಲಾಗಿದೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ನಿಯೋಜಿತ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಶ ಸುವರ್ಣ, ಪ್ರಮುಖರಾದ ಸಂದೀಪ್ ಪಂಪ್ವೆಲ್, ಸಂಪತ್, ನಾಗೇಶ್ ಎಕ್ಕೂರು, ಕಿಶೋರ್ ಮಂಚಿ ಹಾಗೂ ಜಯರಾಮ್ ಉಪಸ್ಥಿತರಿದ್ದರು.

