
ಕಾಸರಗೋಡು: ಕನ್ನಡ ಭವನದ ನೇತೃತ್ವದಲ್ಲಿ ಅಕ್ಟೋಬರ್ 11ರಿಂದ ನಡೆಯಲಿರುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026ರ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ವತಿಯಿಂದ ಕಳೆದ 15 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಈ ಉತ್ಸವ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು, ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು. ಅಕ್ಟೋಬರ್ 11ರಂದು ಶ್ರೀಗಳೇ ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಹತ್ತು ದಿನಗಳ ಉತ್ಸವದಲ್ಲಿ ಸುಮಾರು 28 ಭಜನಾ ತಂಡಗಳ ಭಾಗವಹಿಸುವಿಕೆಯೊಂದಿಗೆ ಸಂಕೀರ್ತನ ದಶಾಹ, ರಾಷ್ಟ್ರೀಯ ಕವಿ ಸಮ್ಮೇಳನ, ಕವಿಗೋಷ್ಠಿ, ಕಲಾಮೇಳ, ಭಕ್ತಿರಸ ಮಂಜರಿ, ವಿಚಾರ ಸಂಕಿರಣ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ. ಕೇರಳ ಮತ್ತು ಕರ್ನಾಟಕದ ನೂರಾರು ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಧಾನ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಭವನದ ವತಿಯಿಂದ ಎಡನೀರು ಮಠಕ್ಕೆ ಹೊರೆಕಾಣಿಕೆ ಸಮರ್ಪಿಸಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು. ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ವಸಂತ್ ಕೆರೆಮನೆ, ಅಖಿಲೇಶ್ ನಗುಮುಖಂ, ವಸಂತ ಬಾರಡ್ಕ, ಜಗನ್ನಾಥ ಶೆಟ್ಟಿ ಪಿ.ಕೆ., ಸಂಧ್ಯಾ ರಾಣಿ ಟೀಚರ್ ಹಾಗೂ ತಾರಾನಾಥ ರೈ ಬದಿಯಡ್ಕ ಉಪಸ್ಥಿತರಿದ್ದರು.


