ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶಕ್ಕೆ

ಬಂಟ್ವಾಳ: ಯಾವುದೇ ಪರವಾನಿಗೆ ಇಲ್ಲದೆ ನೇತ್ರಾವತಿ ನದಿಯಿಂದ ಮರಳು ತುಂಬಿಸಿಕೊಂಡು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಸಜೀಪ ಮುನ್ನೂರು ಗ್ರಾಮದ ಮುಂಡಕೋಡಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಟಿಪ್ಪರ್ ಚಾಲಕ ಸಜೀಪ ಮುನ್ನೂರು ಗ್ರಾಮದ ಮೈದಿನ್ ಅಪ್ಸರ್ (35) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಟಿಪ್ಪರ್ ಮಾಲಕ ಮಹಮ್ಮದ್ ನವಾಜ್ ಹಾಗೂ ಮಂಜಲ್ಪಾದೆಯ ಸುಕೇಶ್, ಪ್ರಶಾಂತ್ ಮತ್ತು ರಾಕೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಳ ನಗರ ಠಾಣೆಯ ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷಕ ದುರ್ಗಪ್ಪ ಕಲಘಟಗಿ ಅವರು ಸಿಬ್ಬಂದಿಯೊಂದಿಗೆ ಗುರುವಾರ ಬೆಳಗ್ಗೆ ಗಸ್ತಿನಲ್ಲಿದ್ದ ಸಂದರ್ಭ ಸಜೀಪ ಮುನ್ನೂರು ಗ್ರಾಮದ ಮುಂಡಕೋಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮುಂಡಕೋಡಿ ಕಡೆಯಿಂದ ಬೆಂಕ್ಯಾ ಕಡೆಗೆ ಮರಳು ತುಂಬಿಸಿಕೊಂಡು ಟಿಪ್ಪರ್ ಲಾರಿ ಬರುತ್ತಿರುವುದು ಕಂಡುಬಂದಿದೆ.
ಪೊಲೀಸರು ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸಲು ಮುಂದಾದಾಗ ಅದರಲ್ಲಿದ್ದ ಮೂವರು ವ್ಯಕ್ತಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಚಾಲಕನನ್ನು ವಿಚಾರಿಸಿದಾಗ ಅವರು ಮಂಜಲ್ಪಾದೆಯ ಸುಕೇಶ್, ಪ್ರಶಾಂತ್ ಹಾಗೂ ರಾಕೇಶ್ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ತಪಾಸಣೆ ವೇಳೆ KA-70-0448 ನೋಂದಣಿ ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಟಿಪ್ಪರ್‌ನಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ. ಮರಳು ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲವೆಂದು ಚಾಲಕ ತಿಳಿಸಿದ್ದು, ಮುಂಡಕೋಡಿಯ ನೇತ್ರಾವತಿ ನದಿಯಿಂದ ಮರಳು ತುಂಬಿಸಿಕೊಂಡು ಸಾಗಿಸಲಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಪಂಚರನ್ನು ಕರೆಸಿ ಮಹಜರು ನಡೆಸಿದ ಪೊಲೀಸರು, ಅಂದಾಜು ರೂ.5 ಲಕ್ಷ ಮೌಲ್ಯದ ಟಿಪ್ಪರ್ ಹಾಗೂ ಸುಮಾರು ರೂ.6 ಸಾವಿರ ಮೌಲ್ಯದ ಒಂದು ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ BNS 2023ರ ಕಲಂ 303(2), ಕರ್ನಾಟಕ ಮೈನರ್ ಮಿನರಲ್ ಕನ್ಸೆಷನ್ ರೂಲ್ಸ್ 1994ರ ಕಲಂ 42, 43, 44 ಹಾಗೂ MMDR ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

SHARE
Loading spinner

One thought on “ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶಕ್ಕೆ”

Leave a Reply

Your email address will not be published. Required fields are marked *

error: Content is protected !!