ಮಣ್ಣಗುಡ್ಡೆಯಲ್ಲಿ ವಿದ್ಯುತ್ ಶವಗಾರ ನಿರ್ಮಾಣ ಸೇರಿ ಎಂಟು ಬೇಡಿಕೆಗಳ ಈಡೇರಿಕೆಗೆ ಕೆ. ಭಾಸ್ಕರ್ ರಾವ್ ಆಗ್ರಹ

ಮಂಗಳೂರು ಜಿಲ್ಲೆ ನಾಮಕರಣ, ಹೊಸ ಬಸ್ ಮಾರ್ಗ, ಹಿರಿಯ ನಾಗರಿಕರಿಗೆ ₹5 ಸಾವಿರ ಗೌರವಧನಕ್ಕೂ ಒತ್ತಾಯ

ಮಂಗಳೂರು: ನಂದಿಗುಡ್ಡ ಮಸಣಭೂಮಿಯಲ್ಲಿ ವಿದ್ಯುತ್ ಶವಗಾರ ನಿರ್ಮಾಣ, ಮಂಗಳಾದೇವಿಯಿಂದ ಎ.ಜೆ. ಆಸ್ಪತ್ರೆ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿಗೆ ಬಸ್ ಸೌಲಭ್ಯ, 70 ವರ್ಷ ಮೇಲ್ಪಟ್ಟ ಪಿಂಚಣಿ ರಹಿತ ಹಿರಿಯ ನಾಗರಿಕರಿಗೆ ಮಾಸಿಕ ₹5 ಸಾವಿರ ಗೌರವಧನ ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಕಾರ್ಪೊರೇಟರ್ ಕೆ. ಭಾಸ್ಕರ್ ರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮತ್ತು ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಹಲವು ವರ್ಷಗಳಿಂದ ಈ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂದಿಗುಡ್ಡ ಮಸಣಭೂಮಿಯಲ್ಲಿ ವಿದ್ಯುತ್ ಶವಗಾರ ನಿರ್ಮಿಸುವ ಯೋಜನೆಗೆ ಈಗಾಗಲೇ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ನಾಗರಾಜ್ ಎಂಬವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ವಿದ್ಯುತ್ ಶವಗಾರ ನಿರ್ಮಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಪ್ರಸ್ತುತ ಒಂದು ಶವಸಂಸ್ಕಾರಕ್ಕೆ ₹5 ಸಾವಿರಕ್ಕೂ ಅಧಿಕ ವೆಚ್ಚ ಭರಿಸುವುದು ಬಡ ಕುಟುಂಬಗಳಿಗೆ ಕಷ್ಟವಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಅಂತ್ಯಸಂಸ್ಕಾರ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ. ಅನಾಥರು, ಅಪರಿಚಿತರು ಹಾಗೂ ಬಡ ಕುಟುಂಬಗಳಿಗೂ ಇದರಿಂದ ಪ್ರಯೋಜನವಾಗಲಿದೆ. ಯೋಜನೆಗೆ ಮಂಜೂರಾತಿ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರ ಜತೆಗೆ, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಮಂಗಳಾದೇವಿಯಿಂದ ಎ.ಜೆ. ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿಗೆ ಬಸ್ ಸೌಲಭ್ಯ

ಮಂಗಳಾದೇವಿಯಿಂದ ಎ.ಜೆ. ಆಸ್ಪತ್ರೆ ಹಾಗೂ ಡೈರಿ ಫಾರ್ಮ್‌ವರೆಗೆ ಯಾವುದೇ ಸಮರ್ಪಕ ಬಸ್ ಸೌಲಭ್ಯವಿಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಎ.ಜೆ. ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳು ದೊರೆಯುವುದರಿಂದ ಮಂಗಳಾದೇವಿ, ಜಪ್ಪು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅಲ್ಲಿಗೆ ತೆರಳಲು ಹೊಸ ಬಸ್ ಮಾರ್ಗ ಆರಂಭಿಸುವುದು ಅಗತ್ಯವಾಗಿದೆ. ಈ ಮಾರ್ಗದಲ್ಲಿ ಬಸ್ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.

ಅದೇ ರೀತಿ, ಮಂಗಳಾದೇವಿಯಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಮೂಲಕ ಜಲ್ಲಿಗುಡ್ಡೆ ಮಾರ್ಗದಲ್ಲಿಯೂ ಬಸ್ ಸೌಲಭ್ಯ ಕಲ್ಪಿಸಬೇಕು. ಈ ಹಿಂದೆ ಸಂಚರಿಸುತ್ತಿದ್ದ 11ಸಿ ಬಸ್ ಸೇವೆಯನ್ನು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಸ ಜಿಲ್ಲಾಧಿಕಾರಿ ಕಚೇರಿ ಆರಂಭವಾಗಿರುವುದರಿಂದ ಮಂಗಳಾದೇವಿ ಮತ್ತು ಜಪ್ಪು ಭಾಗದ ಜನರಿಗೆ ಅನುಕೂಲವಾಗುವಂತೆ ಈ ಮಾರ್ಗದಲ್ಲಿ ಬಸ್ ಸೇವೆ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ಮೂಲಸೌಕರ್ಯವುಳ್ಳ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ

ಮಂಗಳಾದೇವಿಯಿಂದ ಕೊಂಕಣಿ ಪ್ರದೇಶದವರೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮರ್ಪಕ ಬಸ್ ತಂಗುದಾಣಗಳನ್ನು ನಿರ್ಮಿಸಬೇಕು. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ, ಮಾದರಿ ಬಸ್ ನಿಲ್ದಾಣ ವ್ಯವಸ್ಥೆ ಕಲ್ಪಿಸಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದರು.

ಸುಸಜ್ಜಿತ ಪಾಸ್‌ಪೋರ್ಟ್ ಕಚೇರಿ ನಿರ್ಮಾಣವಾಗಲಿ

ಮಂಗಳೂರಿನ ಪ್ರಸ್ತುತ ಪಾಸ್‌ಪೋರ್ಟ್ ಕಚೇರಿಯಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಪಾಸ್‌ಪೋರ್ಟ್ ಸೇವೆ ಪಡೆಯಲು ಬರುವ ಸಾರ್ವಜನಿಕರು ಮಳೆ, ಬಿಸಿಲು ಹಾಗೂ ಗಾಳಿಯ ನಡುವೆಯೇ ಹೊರಗಡೆ ಕಾಯಬೇಕಾದ ಪರಿಸ್ಥಿತಿ ಇದೆ. ವಿದೇಶ ಪ್ರಯಾಣಕ್ಕೆ ಅಗತ್ಯವಾದ ಪ್ರಮುಖ ದಾಖಲೆಯನ್ನು ಪಡೆಯಲು ಬರುವ ಜನರು ಸೂಕ್ತ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿರುವುದು ನಗರದ ಗೌರವಕ್ಕೆ ತಕ್ಕುದಲ್ಲ. ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಸನ ವ್ಯವಸ್ಥೆ, ನೆರಳು ಹಾಗೂ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಪಾಸ್‌ಪೋರ್ಟ್ ಕಚೇರಿಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪಿಂಚಣಿ ಇಲ್ಲದ ಹಿರಿಯ ನಾಗರಿಕರಿಗೆ ₹5 ಸಾವಿರ ಗೌರವಧನ

70 ವರ್ಷ ಮೇಲ್ಪಟ್ಟ, ಯಾವುದೇ ಸರ್ಕಾರಿ ಪಿಂಚಣಿ ಪಡೆಯದ ಹಿರಿಯ ನಾಗರಿಕರಿಗೆ ಮಾಸಿಕ ₹5 ಸಾವಿರ ಗೌರವಧನ ನೀಡುವುದರ ಜತೆಗೆ ಉಚಿತ ವೈದ್ಯಕೀಯ ನೆರವು ಒದಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಭಾಸ್ಕರ್ ರಾವ್ ಆಗ್ರಹಿಸಿದರು.

ಕೃಷಿಕರು, ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು, ಕಲಾವಿದರು, ಛಾಯಾಗ್ರಾಹಕರು, ವೈದ್ಯರು, ವಕೀಲರು, ಸಣ್ಣ ವ್ಯಾಪಾರಿಗಳು, ಟೈಲರ್‌ಗಳು, ಗ್ಯಾರೇಜ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕಲ್ಲು ಕೆಲಸಗಾರರು, ಕ್ಷೌರಿಕರು, ಹೋಟೆಲ್ ಸಹಾಯಕರು, ಶಾಮಿಯಾನ ಹಾಗೂ ಕ್ಯಾಟರಿಂಗ್ ಕಾರ್ಮಿಕರು, ಮೀನು ವ್ಯಾಪಾರಿಗಳು, ಬೋಟಿಂಗ್ ಕ್ಷೇತ್ರದ ಕಾರ್ಮಿಕರು ಮತ್ತು ಕಾರ್ಖಾನೆಗಳಲ್ಲಿ ದುಡಿಯುವವರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಜೀವನ ನಡೆಸಿದ ಹಿರಿಯರಿಗೆ ಈ ಯೋಜನೆ ನೆರವಾಗಲಿದೆ.

ಇತರ ರಾಜ್ಯಗಳು ಹಾಗೂ ದೇಶಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿರುವುದನ್ನು ಪರಿಗಣಿಸಿ ಕರ್ನಾಟಕದಲ್ಲಿಯೂ ಪಿಂಚಣಿ ಸೌಲಭ್ಯವಿಲ್ಲದ ಹಿರಿಯ ನಾಗರಿಕರಿಗೆ ಗೌರವಧನ ಮತ್ತು ವೈದ್ಯಕೀಯ ನೆರವು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಬೇಕು. ಈ ಕುರಿತು ಹಿಂದಿನಿಂದಲೂ ಪ್ರಯತ್ನ ನಡೆಸಲಾಗುತ್ತಿದ್ದು, ಈಗ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಾಗರ ಪಂಚಮಿ, ಓಣಂ, ಅಷ್ಟಮಿ, ತೆನೆ ಹಬ್ಬಕ್ಕೆ ರಜೆ ನೀಡಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಮಹತ್ವ ಪಡೆದಿರುವ ನಾಗರ ಪಂಚಮಿ, ಓಣಂ, ಅಷ್ಟಮಿ ಹಾಗೂ ತೆನೆ ಹಬ್ಬಗಳಿಗೆ ಸರ್ಕಾರಿ ರಜೆ ಘೋಷಿಸಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದರು. ಈ ಭಾಗದಲ್ಲಿ ಆಚರಣೆಯ ಮಹತ್ವ ಕಡಿಮೆ ಇರುವ ಕೆಲವು ರಜೆಗಳನ್ನು ಬದಲಾಯಿಸಿ, ಸ್ಥಳೀಯ ಜನರ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಚರಣೆಗಳಿಗೆ ಅನುಗುಣವಾಗಿ ಈ ನಾಲ್ಕು ಹಬ್ಬಗಳಿಗೆ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಿ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಭಾಸ್ಕರ್ ರಾವ್ ತಿಳಿಸಿದರು. ದಕ್ಷಿಣ ಕನ್ನಡ ಎಂಬ ಹೆಸರಿನ ಬಗ್ಗೆ ಯಾವುದೇ ವಿರೋಧವಾಗಲಿ, ರಾಜಕೀಯ ಅಥವಾ ಧಾರ್ಮಿಕ ಉದ್ದೇಶವಾಗಲಿ ಇಲ್ಲ. ಆದರೆ, ಸಾರ್ವಜನಿಕವಾಗಿ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಗುರುತಾಗಿ ಮಂಗಳೂರು ಹೆಸರು ವ್ಯಾಪಕವಾಗಿ ಬಳಕೆಯಲ್ಲಿದೆ ಎಂದರು.

ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ರೈಲು ನಿಲ್ದಾಣ, ಮಂಗಳೂರು ಪುರಭವನ, ನೆಹರೂ ಮೈದಾನ, ಮಂಗಳೂರು ಗೋಡಂಬಿ ಮತ್ತು ಹಂಚಿನ ಕೈಗಾರಿಕೆಗಳು, ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಪ್ರಮುಖ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಮಂಗಳೂರು ಹೆಸರಿನೊಂದಿಗೆ ಗುರುತಿಸಿಕೊಂಡಿವೆ. ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್‌ನ ಹಿಂದಿನ ಗುರುತು, ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕಿಂಗ್ ಸಂಸ್ಥೆಗಳ ಇತಿಹಾಸದಲ್ಲಿಯೂ ಮಂಗಳೂರು ಹೆಸರು ಪ್ರಮುಖವಾಗಿದೆ. ಮಂಗಳೂರು ಸ್ಟೋರ್ಸ್, ಮಂಗಳೂರು ಗಣೇಶ್ ಬೀಡಿ, ಮಂಗಳೂರು ಪ್ರಕಾಶ್ ಬೀಡಿ, ಮಂಗಳೂರು ಭಾರತ್ ಬೀಡಿ, ಮಂಗಳೂರು ಮಲ್ಲಿಗೆ ಹಾಗೂ ಹೋಟೆಲ್ ತಾಜ್ ಮಹಲ್‌ನಂತಹ ಹೆಸರುಗಳೂ ಮಂಗಳೂರಿನ ಗುರುತನ್ನು ಪ್ರತಿಬಿಂಬಿಸುತ್ತವೆ.

ದೇಶದ ಇತರ ಭಾಗಗಳಿಗೆ ಹಾಗೂ ವಿದೇಶಗಳಿಗೆ ತೆರಳಿದಾಗಲೂ ಜನರು ತಮ್ಮ ಊರನ್ನು ಮಂಗಳೂರು ಎಂದೇ ಪರಿಚಯಿಸಿಕೊಳ್ಳುತ್ತಾರೆ. ಹೀಗಾಗಿ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸುವುದರಿಂದ ಸ್ಥಳೀಯ ಗುರುತು ಮತ್ತಷ್ಟು ಸ್ಪಷ್ಟವಾಗಲಿದೆ. ಈ ಬೇಡಿಕೆಯನ್ನು ಯಾವುದೇ ರಾಜಕೀಯ ಅಥವಾ ಧಾರ್ಮಿಕ ವಿವಾದಕ್ಕೆ ಎಡೆಮಾಡಿಕೊಡದೆ, ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಸರ್ಕಾರ ಅಧಿಕೃತವಾಗಿ ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಎಲ್ಲ ಬೇಡಿಕೆಗಳು ಸಾರ್ವಜನಿಕರ ದೈನಂದಿನ ಜೀವನಕ್ಕೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳು, ಸಾಮಾಜಿಕ ಭದ್ರತೆ ಹಾಗೂ ಜಿಲ್ಲೆಯ ಗುರುತಿನ ವಿಚಾರಗಳಾಗಿವೆ. ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಇವುಗಳನ್ನು ಪರಿಗಣಿಸಿ, ಜನರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆ. ಭಾಸ್ಕರ್ ರಾವ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಯಪ್ರಕಾಶ್, ಮೀನಾಟೆಲ್ಲಿಸ್, ಬಬಿತಾ ಡಿಸೋಜ ಹಾಗೂ ಅವಿತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!