ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಹೊಸದುರ್ಗ ಕೋಟೆ-ಇದೀಗ ಅನಾಥ ಸ್ಥಿತಿಯಲ್ಲಿ

ಕೆಳದಿ ನಾಯಕರಿಂದ ಕೇರಳದ ದಕ್ಷಿಣದಲ್ಲಿ ಸ್ಥಾಪಿತ ಕೋಟೆಗಳಲ್ಲಿ ಹೊಸದುರ್ಗ ಕೋಟೆಯು ಒಂದು . ಬಹುಷಃ ಈ ಕೋಟೆ ಕೆಳದಿ ನಾಯಕರ ಆಳ್ವಿಕೆ ಕಾಲಘಟದ ಕೊನೆಯಲ್ಲಿ ನಿರ್ಮಿಸಲಾಗಿತ್ತೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ . ಹಾಗಾಗಿ ಈ ಭವ್ಯತೆಯನ್ನು ಹೊಸದುರ್ಗ ಎಂದು ಕರೆಯುತ್ತಾರೆ . ಹೊಸ ಎಂದರೆ ನವ , ದುರ್ಗ ಎಂದರೆ ಕೋಟೆ ಎನ್ನುವ ಅರ್ಥವನ್ನು ನೀಡುತ್ತದೆ . ಈಗಾಗಲು ಈ ಪ್ರದೇಶವನ್ನು ಕನ್ನಡಿಗರು ಮತ್ತು ದಾಖಲೆಗಳಲ್ಲಿ ಹೊಸದುರ್ಗ ಎಂದು . ಮಲೆಯಾಳಿಗಳು ಪುದಿಯಕೋಟ ಎಂದು ಕರೆಯುತ್ತಾರೆ .

ಹೊಸದುರ್ಗ ಕೋಟೆಯು ಕಾಸರಗೋಡು ಜಿಲ್ಲೆಯ ಬೇಕಲ್ ಬಳಿಯ ಕಾಂಞಂಗಾಡ್ ಪಟ್ಟಣದಲ್ಲಿದೆ. ಇಕ್ಕೇರಿ ರಾಜವಂಶದ ದೊರೆಯಾದ ಸೋಮಶೇಖರ ನಾಯಕನು ತನ್ನ ಆಡಳಿತ ಕಾಲಘಟದ ಸರಿಸುಮಾರು 1664–1672 ರ ನಡುವೆ ಕೋಟೆಯನ್ನು ನಿರ್ಮಿಸಿರ ಬಹುದೆಂದು ಮಲಬಾರ್ ಇತಿಹಾಸಕಾರ ಅಭಿಪ್ರಾಯವಾಗಿದೆ . ಹೊಸದುರ್ಗ ಕೋಟೆ ಭವ್ಯವಾದ ರಚನಾ ಶೈಲಿಯನ್ನು ಹೊಂದಿದೆ. ಸಾಕಷ್ಟು ಮುಂದುವರೆದ ಕಲಾಕೃತಿಯ ಕೋಟೆಯು ಇದಾಗಿದೆ .

ರಕ್ಷಣಾ ಉದ್ದೇಶದಲ್ಲಿ ಕೋಟೆ

ಪರಕೀಯ ಶತ್ರುಗಳಿಂದ ರಕ್ಷಣೆ ಮತ್ತು ಆಡಳಿತಕ್ಕಾಗಿ ನಿರ್ಮಿಸಲಾದ ಹೊಸದುರ್ಗ ಕೋಟೆಯು ನಾಯಕರ ಆಡಳಿತ ಯುಗದಲ್ಲಿ ಒಂದು ಅಸಾಧಾರಣ ಭದ್ರಕೋಟೆಯಾಗಿತ್ತು. ದಪ್ಪ ಗೋಡೆಗಳು ಮತ್ತು ಕೊತ್ತಲಗಳನ್ನು ಒಳಗೊಂಡಿರುವ ವಿನ್ಯಾಸವು , ಉನ್ನತ ವಾಸ್ತುಶಿಲ್ಪವು ಮೇರು ರಕ್ಷಣಾ ಪ್ರಾಮುಖ್ಯತೆಯನ್ನು ಸಾರುತ್ತದೆ. ಕೋಟೆಯ ವಿನ್ಯಾಸವು ಕಾವಲು ಗೋಪುರಗಳು, ಗೋಡೆಗಳು ಮತ್ತು ಒಳ ಕೋಣೆಗಳನ್ನು ಒಳಗೊಂಡಿದೆ .

ಕೋಟೆಯ ದಕ್ಷಿಣ ಗೋಡೆಯು ಮುಖ್ಯ ರಸ್ತೆಯ ಪಕ್ಕದಲ್ಲಿದೆ. ಆಗ್ನೇಯ ಮೂಲೆಯ ಕೊತ್ತಲದ ಉತ್ತರಕ್ಕೆ ಹತ್ತಿರದಲ್ಲಿ ಒಂದು ಕಾವಲು ಗೋಪುರ ಇದೆ . ಕೋಟೆಯಲ್ಲಿ ಬೃಹತ್ ಕೊತ್ತಲಗಳನ್ನು ಕಾಣಬಹುದು. ಕಾವಲು ಗೋಪುರವು ಈ ಪ್ರದೇಶದ ವಿಹಂಗಮ ನೋಟವನ್ನು ನೀಡುತ್ತದೆ. ಬೇಕಲ , ಕುಂಬಳೆ ಕೋಟೆಗಳಂತಹ ಕೊತ್ತಲಗಳು ಮತ್ತು ಕಾವಲು ಗೋಪುರಗಳ ಶೈಲಿಯಲ್ಲಿ ಗಮನಾರ್ಹ ಹೋಲಿಕೆಗಳನ್ನು ಕಾಣಬಹುದು. ಇದು ಇತಿಹಾಸದ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲುವಂತೆ ರಚನೆಯಾಗಿದೆ . ಗೋಡೆಯ ನಡಿಗೆ ಕಾಲು ಮಾರ್ಗಗಳನ್ನು ಸಹ ಕಾಣಬಹುದು. ನೈಋತ್ಯ ಮೂಲೆಯ ಕೊತ್ತಲದ ಕೆಳಗೆ, ಕೆಂಪು ಕಲ್ಲುಗಳ ರಚನೆಗಳಲ್ಲಿ ಕೆತ್ತಿದ ಕೆಲವು ಗುಹೆಗಳು ಅಸ್ಪಷ್ಟವಾಗಿ ಕಾಣಬಹುದು .

ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಕೋಟೆ

ಹೊಸದುರ್ಗ ಕೋಟೆಯು ಸೈನ್ಯಾಡಳಿತ ಪದ್ದತಿಗೆ ಮಹತ್ವ ನೀಡುವುದರ ಜೊತೆಗೆ ಧಾರ್ಮಿಕತೆಯ ಸೊಗಡನ್ನು ಈ ಭಾಗದಲ್ಲಿ ನೋಡ ಬಹುದು . ಪ್ರಾಚೀನ ಕರ್ಪೂರೇಶ್ವರ ದೇವಸ್ಥಾನವು ಈ ಕೋಟೆಯ ಪರಿಸರದಲ್ಲಿ ನೋಡಬಹುದು . ಈ ದೇವಾಲಯದಲ್ಲಿ ಶಿವಪ್ಪ ನಾಯಕನ ಆರಾಧನಾ ಗುರು ಪೀಠದ ಕಲ್ಲು ಇಂದಿಗೂ ಸುರಕ್ಷಿತವಾಗಿ ಇಟ್ಟಿದ್ದಾರೆ . ಈ ದೇವಾಲಯ ಶಿವಪ್ಪ ನಾಯಕ ಅಥವಾ ಆತನ ಆಳ್ವಿಕೆ ಪೂರ್ವದಲ್ಲೇ ನಿರ್ಮಾಣವಾಗಿದೆಂದು ಗುರು ಪೀಠವು ಸಾಬೀತು ಪಡಿಸುತ್ತದೆ . ಕೋಟೆಯ ಸಮೀಪವೇ ಇತಿಹಾಸ ಪ್ರಸಿದ್ಧ ಸದ್ಗುರು ನಿತ್ಯಾನಂದ ಮತ್ತು ಜಯಾನಂದ ಸ್ವಾಮಿಯವರ ಆಶ್ರಮ ಕೂಡ ಇದೆ . ಇದು ಪ್ರವಾಸಿಗರ ಭಕ್ತರ ಆಕರ್ಷಣೆಯ ತಾಣವಾಗಿದೆ . ಹಲವು ಪವಾಡಗಳು ನಡೆದ ಪುಣ್ಯ ಮಣ್ಣಾಗಿದೆ .

ವಿದೇಶಿ ದೇಶಿಯ ವ್ಯಾಪಾರದಲ್ಲಿ ಕೋಟೆಯ ಪಾತ್ರ

ಅರಭಿ ಸಮುದ್ರದ ಮೇಲಿರುವ ಬೆಟ್ಟದ ತುದಿಯಲ್ಲಿ ನೆಲೆಗೊಂಡಿರುವ ಹೊಸದುರ್ಗ ಕೋಟೆಯು ಕರಾವಳಿ ರಕ್ಷಣಾ ವ್ಯವಸ್ಥೆಗಳಲ್ಲಿ ನಿರ್ಣಾಯಕ ಭದ್ರಕೋಟೆಯಾಗಿ ಹೆಸರುವಾಸಿ ಆಗಿತ್ತು , ದಕ್ಷಿಣ ಗಡಿಗಳನ್ನು ರಕ್ಷಿಸಲು ಮತ್ತು ಕಡಲ ವ್ಯಾಪಾರ ಮಾರ್ಗಗಳನ್ನು ಮೇಲ್ವಿಚಾರಣೆಗೆ ಕೋಟೆ ಹೆಸರುವಾಸಿ ಆಗಿತ್ತು . ಸಾಂಬಾರ ಪದಾರ್ಥಗಳು ಮತ್ತು ವಾಣಿಜ್ಯ ಬೆಳೆಗಳ ಉತ್ಪನವನ್ನು ಮಾರಾಟ ಮಾಡಲಾಗುತ್ತಿತ್ತು . ಕಾಲಾನಂತರದಲ್ಲಿ, ಇದು ಮೈಸೂರಿನ ಹೈದರ್ ಅಲಿ ವಶವಾಗುತ್ತೆ , ನಂತರ ಮೈಸೂರು ಸಾಮ್ರಾಜ್ಯ ಪತನದ ಬಳಿಕ ಬ್ರಿಟೀಷರ ವಶವಾಗುತ್ತೆ. ಬ್ರಿಟೀಷರು ಇದನ್ನು ಆಡಳಿತ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುತ್ತಾರೆ.

.

ಸದ್ಯದ ಸ್ಥಿತಿ

ಸ್ಥಳೀಯವಾಗಿ ಆಕರ್ಷಣೀಯ ತಾಣಗಳು ಧಾರ್ಮಿಕ ಶ್ರದ್ದಾ ಭಕ್ತಿಯ ದೇವಾಲಯಗಳು ಇದ್ದರೂ ಕೂಡ ಕೋಟೆ ಇಂದು ಅನಾಥವಾಗಿದೆ . ಸುತ್ತಲೂ ಕಾಡುಗಳು ಪೊದೆಗಳು ಸುತ್ತುವರೆದು ಕೋಟೆಯು ತನ್ನ ಗತ ವೈಭವವನ್ನು ಕಳೆದು ಕೊಳ್ಳುತ್ತಾ ಅನಾಥ ಭಾವವನ್ನು ತೋರ್ಪಡಿಸುತ್ತಿದೆ . ಕಾಲಾಂತರದಲ್ಲಿ ಕೋಟೆ ಸಂಪೂರ್ಣವಾಗಿ ಮರೆಯಾಗುವ ಸಾಧ್ಯತೆ ಇದೆ . ಈ ಬಗ್ಗೆ ಪುರಾತತ್ವ ಇಲಾಖೆಯು ರಕ್ಷಣಾ ಕ್ರಮವನ್ನು ಕೈಗೊಳ್ಳಬೇಕು .

✍🏻✍🏻ಗಿರೀಶ್ ಪಿ ಎಂ ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!