​ಮಂಜೇಶ್ವರದ ಗಿಳಿವಿಂಡುವಿನಲ್ಲಿ ಸಾಹಿತ್ಯ ಸಂಭ್ರಮ: ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

​ ಮಂಜೇಶ್ವರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕುವೆಂಪು ಪ್ರತಿಷ್ಠಾನ, ತುಳು ಭವನ ಬದಿಯಡ್ಕ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ ಬಿ.ಎ.ಟಿ. ವೆಂಕಟರಾಜ ಪುಂಚಿತ್ತಾಯರ 89ನೇ ಜನ್ಮದಿನೋತ್ಸವದ ಸ್ಮರಣಾರ್ಥ ‘ಕುವೆಂಪು ನೆನಪು 2026’ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಮಾರಂಭವು ಮಂಜೇಶ್ವರದ ‘ಗಿಳಿವಿಂಡು’ ಆವರಣದ ಪಾರ್ಥಿಸುಬ್ಬ ವೇದಿಕೆಯಲ್ಲಿ ಶನಿವಾರ ವೈಭವದಿಂದ ಜರುಗಿತು.

​ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಸಲೀಂ ಅಹ್ಮದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
​
ಬಹುಮುಖಿ ಸಾಹಿತ್ಯ ಸಾಧನೆ, ಬಂಡಾಯ ಸಾಹಿತ್ಯ ಸಂಘಟನೆ, ಚಲನಚಿತ್ರ ನಿರ್ದೇಶನ ಹಾಗೂ ಗಡಿನಾಡಿನ ಕನ್ನಡ ಜಾಗೃತಿಗೆ ಸಲ್ಲಿಸಿರುವ ಅಪಾರ ಸೇವೆಯನ್ನು ಗೌರವಿಸಿ ಹಿರಿಯ ಸಾಹಿತಿ ನಾದೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ಈ ವರ್ಷದ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

​ಲೇಖಕ ಶಾಫಿ ಬಂಡಸಾಲೆ ದುಬೈ ರಚಿಸಿರುವ ‘ಹೃದಯಗೀತೆ’ ಕೃತಿಯನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ, ಮಾಜಿ ಕೇಂದ್ರ ಸಚಿವರೂ ಆದ ಡಾ. ಎಂ. ವೀರಪ್ಪ ಮೊಯ್ಲಿ ಅವರು ಬಿಡುಗಡೆಗೊಳಿಸಿದರು.
ವಕೀಲ ಎಂ.ಎಸ್. ಥಾಮಸ್ ಡಿಸೋಜ ಕೃತಿ ಪರಿಚಯ ಮಾಡಿಕೊಟ್ಟರು.
ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ‘ಕುವೆಂಪು ನೆನಪು’ ಕುರಿತು ಆಶಯ ಭಾಷಣ ಮಾಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಅವರು ‘ಕುವೆಂಪು ನೆನಪು’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.

​
ಸಮಾರಂಭದಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಕುಂಟಾರು ರವೀಶ ತಂತ್ರಿ, ಸ್ವಾಗತ ಸಮಿತಿ ಅಧ್ಯಕ್ಷ ಸಯ್ಯದ್ ಯು.ಕೆ. ಸೈಫುಲ್ಲಾ ತಂಘಲ್ ಉದ್ಯಾವರ, ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಬಶೀರ್ ಕನಿಲ, ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಎ.ಆರ್. ಸುಬ್ಬಯ್ಯಕಟ್ಟೆ, ಜಿಲ್ಲಾ ಪಂಚಾಯತಿ ಸದಸ್ಯೆ ಇರ್ಫಾನಾ ಇಕ್ಬಾಲ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸಂಸ್ಥಾಪಕ ಅಶೋಕ ಚಂದರಗಿ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಫಿ ನಾಯರ್ಕಾಪು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಟ್ರಸ್ಟಿ ಡಾ. ಉದಯ ಕುಮಾರ್ ಇರ್ವತ್ತೂರು ಹಾಗೂ ಅನೇಕ ಪ್ರಮುಖ ಗಣ್ಯರು ಭಾಗವಹಿಸಿದ್ದರು.

​ಬೆಳಿಗ್ಗೆಯಿಂದಲೇ ಸೂರಂಬೆಳು ಕಣ್ಣನ್ ತಂಡದಿಂದ ಕುವೆಂಪು ವಿರಚಿತ ಹಾಡುಗಳ ನೃತ್ಯ ವೈಭವ, ಭವ್ಯ ಗಾಯನ ಹಾಗೂ ಬೆಂಗಳೂರಿನ ಡಾ. ನಾಗೇಶ್ ಕೆ.ಎನ್. ನೇತೃತ್ವದ ಕಲಾ ತಂಡಗಳಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಿದವು. ಗಡಿನಾಡಿನ ನೂರಾರು ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳು ಈ ಸಾಹಿತ್ಯಿಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!