ಕನ್ನಡ ರಾಜ್ಯೋತ್ಸವಕ್ಕೆ ರಜೆ ಅಡ್ಡಿಯಾಗದಿರಲಿ: ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಆಚರಣೆಗೆ ಹಸೈನಾರ್ ತಾಳಿತ್ತನೂಜಿ ಮನವಿ

ಬಂಟ್ವಾಳ : ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರ ಸೂಚನೆಯ ಮೇರೆಗೆ ನವೆಂಬರ್ 1 ಕನ್ನಡ ರಾಜ್ಯೋತ್ಸವವು ಕನ್ನಡಿಗರ ಹೆಮ್ಮೆ, ಸ್ವಾಭಿಮಾನ ಮತ್ತು ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಈ ದಿನ ರಜಾದಿನವಾಗಿರುವುದರಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಶಾಲೆಗಳಲ್ಲಿ ನಡೆಯದೆ ಉಳಿಯಬಾರದು. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಕನ್ನಡ ಜಾಗೃತಿ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ. ಕನ್ನಡ ರಾಜ್ಯೋತ್ಸವದಂದು ಶಾಲೆಗಳಲ್ಲಿ ಧ್ವಜಾರೋಹಣ, ಕನ್ನಡ ನಾಡಗೀತೆ, ಕನ್ನಡದ ಮಹನೀಯರ ಪರಿಚಯ, ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮತ್ತು ಗೌರವ ಬೆಳೆಸಬೇಕು. ರಜಾದಿನವೆಂಬ ಕಾರಣಕ್ಕೆ ರಾಜ್ಯೋತ್ಸವದ ಮಹತ್ವ ಮರೆಯಾಗದಂತೆ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರು ವಿಶೇಷ ಮುತುವರ್ಜಿ ವಹಿಸಬೇಕು.

ಕನ್ನಡವು ನಮ್ಮ ನಾಡಿನ ಅಸ್ಮಿತೆಯಾಗಿದ್ದು, ಅದರ ಉಳಿವು ಮತ್ತು ಬೆಳವಣಿಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳಲ್ಲಿ ಕನ್ನಡ ಮಾತನಾಡುವ, ಓದುವ ಮತ್ತು ಬರೆಯುವ ಅಭ್ಯಾಸವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡದ ಗೌರವವನ್ನು ಎತ್ತಿಹಿಡಿಯಬೇಕೆಂದು ಹಸೈನಾರ್ ತಾಳಿತ್ತನೂಜಿ ಪತ್ರೀಕೆಗೆ ತಿಳಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!