
ಕಾಸರಗೋಡು : ಮುಂಬೈಗೆ ತೆರಳುತ್ತಿದ್ದ ವಿಶೇಷ ರೈಲಿನ ವಿಕಲಚೇತನರ ಬೋಗಿಯಲ್ಲಿ, ಕಾಸರಗೋಡಿನ ದೃಷ್ಟಿಹೀನ ಮಹಿಳೆಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಆರೋಪದ ಮೇಲೆ ಕರ್ನಾಟಕದ ಕೊಡಗು ಹೊಸೂರಿನ ಅಯ್ಯಪ್ಪ ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆಲುವಾದಿಂದ ರೈಲು ಹತ್ತಿದ್ದ ಮಹಿಳೆ ಮತ್ತು ಅವರ ಮಗನ ಬಳಿ ಕುಡಿದುಕೊಂಡು ಬಂದ ಆರೋಪಿ ಅನುಚಿತವಾಗಿ ವರ್ತಿಸಿ, ದೈಹಿಕ ಕಿರುಕುಳ ನೀಡಿದ್ದಾನೆ.

ಮಹಿಳೆ ಚೈನ್ ಎಳೆದು ರೈಲು ನಿಲ್ಲಿಸಿದ ಬಳಿಕ ಗಾರ್ಡ್ ನೀಡಿದ ಮಾಹಿತಿಯ ಮೇರೆಗೆ, ಕಾಸರಗೋಡು ನಿಲ್ದಾಣದಲ್ಲಿ ಪೊಲೀಸರು ಹಾಗೂ ಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಎಸ್ಐ ಸಿ.ಎಸ್. ಸುನೀಲ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

