ಉಪ್ಪಳ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪರಂಬಳ ಕಯ್ಯಾರಿನ ಭಾರತ ಮಾತಾ ಸೇವಾ ಟ್ರಸ್ಟ್ನ ಸಭಾಂಗಣದಲ್ಲಿ ಇಂದು ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರ ನಡೆಯಿತು.

ಸಂಘ ಶಕ್ತಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ.) ಪರಂಬಳ ಕಯ್ಯಾರು ಇದರ ನೇತೃತ್ವದಲ್ಲಿ, ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಆಶ್ರಯದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಂ ಚಾರಿಟೇಬಲ್ ಟ್ರಸ್ಟ್ (ರಿ.), ಒನ್ಸೈಟ್ ಎಸ್ಪಿಲೋರ್ ಲಕೋಟಿಕಾ ಫೌಂಡೇಶನ್, ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಹಾಗೂ ಡಾ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.) ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.

ಇದೇ ಸಂದರ್ಭದಲ್ಲಿ, ಮಂಗಳೂರಿನ ತಲಪಾಡಿಯ ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 8.30ರಿಂದ ಆರಂಭವಾದ ಕಾರ್ಯಕ್ರಮಕ್ಕೆ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರಿನ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶುಭಾಶೀರ್ವಾದ ನೀಡಿದರು. ಸಂಘ ಶಕ್ತಿ ಕಯ್ಯಾರಿನ ಅಧ್ಯಕ್ಷ ಪ್ರಶಾಂತ್ ಕಯ್ಯಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಶ್ರೀಕೃಷ್ಣ ಪ್ರಸಾದ್ ಶಿಬಿರವನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ತಲಪಾಡಿಯ ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಬೇಕಲ್, ಕೊಂಡೆವೂರಿನ ಜೆ.ಎಸ್.ಎನ್.ಎಂ. ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಮೋಹನದಾಸ, ಕಣ್ಣೂರು ಜಿಲ್ಲಾ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೋಪಿನಾಥನ್, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಹಾಗೂ ದುರ್ಗಾಶಕ್ತಿ ಕುಣಿತ ಭಜನಾ ತಂಡದ ಗೌರವ ಮಾರ್ಗದರ್ಶಕಿ ರಮ್ಯಾ ಎನ್. ದರ್ಬೆತ್ತಡ್ಕ, ಭಾರತ ಮಾತಾ ಸೇವಾ ಟ್ರಸ್ಟ್ನ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಮತ್ತು ಮಾಜಿ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರು ಉಪಸ್ಥಿತರಿದ್ದರು. ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಪ್ರದಾನ ಸಂಚಾಲಕ ಸತೀಶ್ ಕುಮಾರ್ ಕಾಪು ಪ್ರಸ್ತಾವಿಸಿ ಸ್ವಾಗತಿಸಿ ಧನ್ಯವಾದ ವಿತ್ತರು
ಶಿಬಿರದಲ್ಲಿ ಸಾರ್ವಜನಿಕರಿಗೆ ನೇತ್ರ ತಪಾಸಣೆ, ಕಣ್ಣಿನ ಆರೋಗ್ಯದ ಕುರಿತು ವೈದ್ಯಕೀಯ ಸಲಹೆ ಹಾಗೂ ಆಯುರ್ವೇದ ಚಿಕಿತ್ಸಾ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಯಿತು. ವಿವಿಧ ವೈದ್ಯಕೀಯ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳು ಕೈಜೋಡಿಸುವ ಮೂಲಕ ಸ್ಥಳೀಯ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಯತ್ನ ನಡೆಯಿತು.

ಇಂತಹ ಉಚಿತ ಆರೋಗ್ಯ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ, ವೈದ್ಯಕೀಯ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಂಡರು.

