ಕಾಸರಗೋಡು: ಚಲಿಸುವ ರೈಲಿನಲ್ಲಿ ದೃಷ್ಟಿಹೀನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಕರ್ನಾಟಕ ಮೂಲದ ಅಯ್ಯಪ್ಪ (23) ಎಂಬ ಯುವಕನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ಗೆ ತೆರಳುತ್ತಿದ್ದ ವಿಶೇಷ ರೈಲಿನಲ್ಲಿ ರವಿವಾರ ಮುಂಜಾನೆ ಈ ಘಟನೆ ನಡೆದಿದೆ. ಎರ್ನಾಕುಳಂನಿಂದ ಒಂಬತ್ತು ವರ್ಷದ ಮಗನೊಂದಿಗೆ ಮನೆಗೆ ಮರಳುತ್ತಿದ್ದ 49 ವರ್ಷದ ಮಹಿಳೆಯ ಮೇಲೆ, ಪಯ್ಯನ್ನೂರು ತಲುಪುವ ವೇಳೆ ಆರೋಪಿ ಹಲ್ಲೆ ನಡೆಸಿ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ವೇಳೆ ತಾಯಿಯನ್ನು ರಕ್ಷಿಸಲು ಬಾಲಕ, ಅವರ ಸೂಚನೆಯಂತೆ ತುರ್ತು ಸರಪಳಿ ಎಳೆದು ರೈಲನ್ನು ನಿಲ್ಲಿಸಿದ್ದಾನೆ. ಆರೋಪಿ ಪಕ್ಕದ ಬೋಗಿಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂಧಿಸಿದ್ದಾರೆ. ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

