ಗೆಳೆಯರ ಬಳಗ (ರಿ) ಬಲ್ಲಂಗುಡೆಲು ವತಿಯಿಂದ ಉಚಿತ ವೈದ್ಯಕೀಯ ತಪಾಸಣೆ, ಬೃಹತ್ ರಕ್ತದಾನ ಶಿಬಿರ: ನೂರಕ್ಕೂ ಅಧಿಕ ಮಂದಿ ರಕ್ತದಾನ

ಮಂಜೇಶ್ವರ: “ಆರೋಗ್ಯವೇ ನಮ್ಮ ಭಾಗ್ಯ. ನಮ್ಮ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿರುವುದರಿಂದ ಮೂರು ಅಥವಾ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಗೆಳೆಯರ ಬಳಗದಂತಹ ಸಂಘಟನೆಗಳು ಆಯೋಜಿಸುವ ಉಚಿತ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು” ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದರು.

ಗೆಳೆಯರ ಬಳಗ (ರಿ.) ಬಲ್ಲಂಗುಡೆಲು–ಮಜಿಬೈಲು ವತಿಯಿಂದ ಅಕ್ಟೋಬರ್ 25ರಂದು ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಡಂಬೈಲು ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಎಸ್. ಹೆಗ್ಡೆ ಆಸ್ಪತ್ರೆ , ದೇರಳಕಟ್ಟೆ ಹಾಗೂ ತೇಜಸ್ವಿನಿ ಆಸ್ಪತ್ರೆ, ಮಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ಶಿಬಿರ ನಡೆಯಿತು. ಶಿಬಿರದಲ್ಲಿ ಹಲವಾರು ಮಂದಿ ಉಚಿತ ವೈದ್ಯಕೀಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ನೂರಕ್ಕೂ ಅಧಿಕ ಮಂದಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ಎಂ. ದಾಮೋದರ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜಾ, ಶಾಲಾ ಮುಖ್ಯೋಪಾಧ್ಯಾಯ ಸಂಜೀವ ಎಂ., ನಾರಾಯಣ ನಾಯ್ಕ್ ನಡುಹಿತ್ಲು, ರಮೇಶ್ ಸುವರ್ಣ, ಬಳಗದ ಗೌರವಾಧ್ಯಕ್ಷ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅನಂತ ಪದಕಣ್ಣಯ, ಜಯರಾಜ್ ಶೆಟ್ಟಿ ಚಾರ್ಲ, ಅರವಿಂದಾಕ್ಷ ಭಂಡಾರಿ, ಅಬ್ಬಾಸ್ ಪಮ್ಮಾರ್, ಬಳಗದ ಅಧ್ಯಕ್ಷ ಕಾರ್ತಿಕ್ ಶೆಟ್ಟಿ ಮಜಿಬೈಲು ಹಾಗೂ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಸೇರಿದಂತೆ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಗದೀಶ್ ಮೂಡಂಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಬಳಗದ ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು. ರಂಗ ಕಲಾವಿದ ದೇವಿಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ರಕ್ತದಾನದ ಮಹತ್ವವನ್ನು ಸಾರಿದ ಈ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!