ಕಾಸರಗೋಡು: ಕಥಾಬಿಂದು ಪ್ರಕಾಶನದ ರೂವಾರಿ, ಕಾದಂಬರಿಕಾರ ಹಾಗೂ ಸಂಘಟಕ ಮಂಗಳೂರಿನ ಪಿ.ವಿ. ಪ್ರದೀಪ್ ಕುಮಾರ್ ಅವರು ಕನ್ನಡ ಭವನದ ಅಂತಾರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ–2026ಕ್ಕೆ ಆಯ್ಕೆಯಾಗಿದ್ದಾರೆ.

ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ನವೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಭವನದ ಕನ್ನಡ ಭುವನೇಶ್ವರಿ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆ ಇಲಾಖೆಯ ಕನ್ನಡ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇರಳ ಮತ್ತು ಕರ್ನಾಟಕದ ಗಣ್ಯರು ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂತಾರಾಜ್ಯ ಮಟ್ಟದ 10 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


