ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತಂದ ಅನುದಾನವೆಷ್ಟು ಎಂಬುದನ್ನು ಬಹಿರಂಗಪಡಿಸಿ ಶ್ವೇತಪತ್ರ ಹೊರಡಿಸಲಿ. ಈ ಕುರಿತು ನೇರಾನೇರ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಸವಾಲು ಹಾಕಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಶಾಸಕ ವೇದವ್ಯಾಸ ಕಾಮತ್ ಬೀದಿ ನಾಟಕ ಮಾಡುತ್ತಿದ್ದಾರೆ. 2019ರಿಂದ 2025ರವರೆಗೆ ಬಿಜೆಪಿ ಆಡಳಿತದಲ್ಲಿತ್ತು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಅವರೇ ಶಾಸಕರಾಗಿದ್ದಾರೆ. ಅಧಿಕಾರ ಮತ್ತು ಅವಕಾಶಗಳಿದ್ದರೂ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಏಕೆ ಸಾಧ್ಯವಾಗಿಲ್ಲ? ಅವರ ಅವಧಿಯ ಅಭಿವೃದ್ಧಿ ಸಾಧನೆಗಳೇನು ಎಂದು ಪ್ರಶ್ನಿಸಿದರು.

ಕದ್ರಿ ಶಿವಭಾಗ್ ವಾರ್ಡ್ನಲ್ಲಿ ಬಿಜೆಪಿ ಕಾರ್ಪೊರೇಟರ್ ಇದ್ದಾಗ ಈ ಸಮಸ್ಯೆಗಳ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ? ಈಗ ಬೀದಿ ನಾಟಕ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ಶಾಸಕರು ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ₹145 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕರಿಗೆ ₹25 ಕೋಟಿ, ನೈಸರ್ಗಿಕ ವಿಕೋಪದಡಿ ₹15 ಕೋಟಿ, 15ನೇ ಹಣಕಾಸು ಆಯೋಗದಡಿ ₹10 ಕೋಟಿ ಹಾಗೂ ರಾಜ್ಯ ಹಣಕಾಸು ಆಯೋಗದಿಂದ ₹5 ಕೋಟಿ ಅನುದಾನ ದೊರೆತಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ₹400 ಕೋಟಿ ಅನುದಾನ ಘೋಷಿಸಿದ್ದಾರೆ. ಒಟ್ಟು ₹645 ಕೋಟಿ ಮೊತ್ತದ ಕಾಮಗಾರಿಗಳಿಗೆ ಘೋಷಣೆ ಮಾಡಲಾಗಿದ್ದು, ಹಲವು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಅನುಷ್ಠಾನದ ಹಂತದಲ್ಲಿವೆ ಎಂದು ತಿಳಿಸಿದರು.

ಇಷ್ಟೊಂದು ಅನುದಾನ ಮತ್ತು ಅಭಿವೃದ್ಧಿ ಕಾಮಗಾರಿಗಳಿದ್ದರೂ ಮಂಗಳೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲವೇಕೆ? ಮಹಾನಗರ ಪಾಲಿಕೆಗೆ ಅನುದಾನ ಬರುತ್ತಿಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತಿದ್ದೀರಿ? ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಶಾಸಕರೇ ಅಧ್ಯಕ್ಷತೆ ವಹಿಸುವಾಗ ನಗರದ ವಾಸ್ತವ ಸ್ಥಿತಿ ತಿಳಿದಿಲ್ಲವೇ ಎಂದು ವಿನಯರಾಜ್ ಪ್ರಶ್ನಿಸಿದರು.
ಮಂಗಳೂರು ದಸರಾ ಸಂದರ್ಭದಲ್ಲಿ ಜಾತಿ-ಮತ ಭೇದ ಮರೆತು ಜನರು ಪಾಲ್ಗೊಳ್ಳುತ್ತಾರೆ. ಈ ವೇಳೆ ನಗರದ ಸ್ವಚ್ಛತೆ ಮತ್ತು ವಿದ್ಯುದ್ದೀಪಗಳ ವ್ಯವಸ್ಥೆ ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ. ಇದನ್ನು ವೈಯಕ್ತಿಕ ಸಾಧನೆ ಎಂದು ಬಿಂಬಿಸಬಾರದು. ಎಲ್ಲ ಪಕ್ಷಗಳ ಒತ್ತಾಯ ಮತ್ತು ಸಹಕಾರದಿಂದ ಇಂತಹ ಕಾರ್ಯಗಳು ನಡೆಯುತ್ತವೆ. ಮಹಾನಗರ ಪಾಲಿಕೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಿಂಜರಿಕೆ ತೋರಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಿಂದ ಶಾಸಕ ವೇದವ್ಯಾಸ ಕಾಮತ್ ಸಾರ್ವಜನಿಕವಾಗಿ ಪ್ರಹಸನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕರು ತಮ್ಮ ಅಭಿವೃದ್ಧಿ ಸಾಧನೆಗಳ ಕುರಿತು ಶ್ವೇತಪತ್ರ ಹೊರಡಿಸಿ, ಬಹಿರಂಗ ಚರ್ಚೆಗೆ ಬರಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದಿನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

