ಅ. 31, ನ. 1ರಂದು ಮಂಗಳೂರಿನಲ್ಲಿ ‘ಆರ್ಯ’ ಜೆಸಿಐ ವಲಯ ಸಮ್ಮೇಳನ

ಮಂಗಳೂರು: ಅಂತರರಾಷ್ಟ್ರೀಯ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ) ವಲಯ 15ರ 2026ನೇ ಸಾಲಿನ ‘ಆರ್ಯ’ ವಲಯ ಸಮ್ಮೇಳನವು ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಅಡ್ಯಾರ್ ಗಾರ್ಡನ್‌ನ ವಿ.ಕೆ. ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಲಿದೆ. ಜೆಸಿಐ ವಿಟ್ಲ ಮತ್ತು ತುಂಬೆ ಎಲೈಟ್ ಆತಿಥ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸುಮಾರು ಒಂದು ಸಾವಿರ ಜೆಸಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಸಮ್ಮೇಳನದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸಂಜೆ, ಪ್ರಶಸ್ತಿ ಪ್ರದಾನ, ವಿವಿಧ ಘಟಕಗಳ ಸಾಧನೆಗಳಿಗೆ ಮನ್ನಣೆ ಹಾಗೂ ಮುಂದಿನ ವಲಯಾಧ್ಯಕ್ಷರ ಚುನಾವಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಜೆಸಿಐ ಆಡಳಿತ ಸಮಿತಿ ಸದಸ್ಯ ವೈ. ಸುಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾದ ‘ಅಲ್ ಮಝೈನ್’ ಸಂಸ್ಥೆಯ ಮುಖ್ಯಸ್ಥ ಹಾಗೂ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಝಕರಿಯ ಜೋಕಟ್ಟೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಇಶಾನ್ ಆರ್. ಅಗರ್ವಾಲ್, ನಿಕಟಪೂರ್ವ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಾಗೂ ಜೆ.ಎ.ಸಿ. ವಲಯಾಧ್ಯಕ್ಷ ಜಬ್ಬಾರ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶೆರಲೈನ್ ಸಿಕ್ವೆರಾ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಎಕ್ಸ್‌ಪೋ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ. ಸಮ್ಮೇಳನದ ನಿರ್ದೇಶಕರಾಗಿ ಜೆಸಿಐ ವಿಟ್ಲದ ಪೂರ್ವಾಧ್ಯಕ್ಷ ರಶೀದ್ ವಿಟ್ಲ ಕಾರ್ಯನಿರ್ವಹಿಸುತ್ತಿದ್ದು, ಆತಿಥೇಯ ಘಟಕದ ಅಧ್ಯಕ್ಷ ಸಂದೀಪ್ ಹಾಗೂ ಸಹ ಆತಿಥೇಯ ಘಟಕದ ಅಧ್ಯಕ್ಷೆ ಸಮತಾ ಕಿಶೋರ್ ಸಹಕರಿಸುತ್ತಿದ್ದಾರೆ.

ವಲಯ 15ರಲ್ಲಿ 60 ಘಟಕಗಳು ಹಾಗೂ ಸುಮಾರು 6,000 ಸದಸ್ಯರಿದ್ದಾರೆ. ತರಬೇತಿಯ ಮೂಲಕ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಜೆಸಿಐನ ಪ್ರಮುಖ ಉದ್ದೇಶವಾಗಿದೆ. 2026ರಲ್ಲಿ ಶಾಲೆ, ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 1,200ಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬಾಟಲ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 10,000 ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಗಿದೆ. ‘ಕಮ್ಯುನಿಟಿ ಇಂಪ್ಯಾಕ್ಟ್’ ಕಾರ್ಯಕ್ರಮದಡಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಬಸ್ ತಂಗುದಾಣಗಳ ವ್ಯವಸ್ಥೆ, ಆಸ್ಪತ್ರೆಗಳಿಗೆ ಪರೀಕ್ಷಾ ಯಂತ್ರಗಳು ಮತ್ತು ವೀಲ್‌ಚೇರ್‌ಗಳ ಕೊಡುಗೆ ಹಾಗೂ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, 2,000 ಯೂನಿಟ್ ರಕ್ತದಾನ ಮಾಡಲಾಗಿದೆ.

‘ಕಾಬಿಲ್’ ಕಾರ್ಯಕ್ರಮದಡಿ ಮಹಿಳೆಯರ ಸ್ವಾವಲಂಬನೆಗಾಗಿ ವಿವಿಧ ತರಬೇತಿಗಳನ್ನು ಆಯೋಜಿಸಲಾಗಿದ್ದು, ಮೂರು ಜಿಲ್ಲೆಗಳ ಆಯ್ದ ಶಾಲಾ ಮಕ್ಕಳಿಗೆ ವಿವಿಧ ಪರೀಕ್ಷೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗಿದೆ. ಉದ್ಯಮಶೀಲತೆ ಹಾಗೂ ವ್ಯವಹಾರ ಅಭಿವೃದ್ಧಿಗೆ ‘ಜೆಕಾಂ ಟೇಬಲ್’ ಕಾರ್ಯಕ್ರಮ, ಸದಸ್ಯರಿಗೆ ಕಲ್ಯಾಣ ನಿಧಿಯಡಿ ಮರಣ ಪರಿಹಾರ ವಿಮಾ ಸೌಲಭ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರ ರೂಪಿಸುವಿಕೆ, ವಾರ್ಷಿಕವಾಗಿ 150 ಮಕ್ಕಳಿಗೆ ಶಾಶ್ವತ ವಿದ್ಯಾರ್ಥಿವೇತನ ಹಾಗೂ ವಿವಿಧ ಹಂತಗಳಲ್ಲಿ ನಾಯಕತ್ವ ಬೆಳೆಸುವ ಸಮ್ಮೇಳನಗಳ ಆಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ವಲಯ 15 ಕೈಗೊಂಡಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ನಿರ್ದೇಶಕ ರಶೀದ್ ವಿಟ್ಲ, ಜೆಸಿಐ ವಿಟ್ಲ ಅಧ್ಯಕ್ಷ ಸಂದೀಪ್ ಹಾಗೂ ವಲಯಾಧ್ಯಕ್ಷರ ಕಾರ್ಯನಿರ್ವಾಹಕ ಲೂವಿಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!