ದುಬೈ: ಯುಎಇಯ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯರು, ಆರೋಗ್ಯ ತಜ್ಞರು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಆರನೇ ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದುಬೈನ ಗ್ರ್ಯಾಂಡ್ ಹಯಾತ್ನಲ್ಲಿ ನಡೆಯಿತು.


ಯುಎಇ ಸಚಿವ ಸಂಪುಟದ ಸದಸ್ಯ ಹಾಗೂ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1,000 ಗಣ್ಯರು ಭಾಗವಹಿಸಿದ್ದರು. ವೈದ್ಯಕೀಯ ಸೇವೆ, ಶಸ್ತ್ರಚಿಕಿತ್ಸಾ ಆವಿಷ್ಕಾರ, ಸಾರ್ವಜನಿಕ ಆರೋಗ್ಯ, ಸಂಶೋಧನೆ, ವೈದ್ಯಕೀಯ ಶಿಕ್ಷಣ ಹಾಗೂ ರೋಗಿಗಳ ಆರೈಕೆ ಸೇರಿದಂತೆ 50ಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 15 ಮಂದಿ ಯುಎಇ ರಾಷ್ಟ್ರೀಯ ಸಾಧಕರನ್ನೂ ವಿಶೇಷವಾಗಿ ಗೌರವಿಸಲಾಯಿತು.

ಆರೋಗ್ಯ ಕ್ಷೇತ್ರದಲ್ಲಿ ಮಾನವೀಯತೆ, ನಾವೀನ್ಯತೆ ಮತ್ತು ರೋಗಿಗಳ ಆರೈಕೆಗೆ ಆದ್ಯತೆ ನೀಡುವ ಅಗತ್ಯವನ್ನು ಶೇಖ್ ನಹ್ಯಾನ್ ಒತ್ತಿಹೇಳಿದರು. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ವೈದ್ಯಕೀಯ ಸೇವೆಯನ್ನು ಸುಧಾರಿಸಬಲ್ಲವಾದರೂ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳಿಗೆ ಪರ್ಯಾಯವಾಗಲಾರವು ಎಂದರು.

ತುಂಬೆ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಹೆಲ್ತ್ ಮ್ಯಾಗಜೀನ್ನ ಸ್ಥಾಪಕ ಮತ್ತು ಪ್ರಕಾಶಕ ಡಾ. ತುಂಬೆ ಮೊಯ್ದೀನ್ ಮಾತನಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಶೇಖ್ ನಹ್ಯಾನ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.
ತುಂಬೆ ಮೀಡಿಯಾದ ಪ್ರಮುಖ ಪ್ರಕಟಣೆಯಾದ ಹೆಲ್ತ್ ಮ್ಯಾಗಜೀನ್ ಆಯೋಜಿಸಿದ ಈ ಸಮಾರಂಭದಲ್ಲಿ, ನೈಟ್ ಫ್ರಾಂಕ್ ಸಂಸ್ಥೆಯು ಜ್ಞಾನ ಪಾಲುದಾರನಾಗಿ ಕಾರ್ಯನಿರ್ವಹಿಸಿದ್ದು, ನಾಮನಿರ್ದೇಶನಗಳ ಸ್ವತಂತ್ರ ಮೌಲ್ಯಮಾಪನ ನಡೆಸಿತು. ಯುಎಇ ಹಾಗೂ ಗಲ್ಫ್ ರಾಷ್ಟ್ರಗಳ ಆರೋಗ್ಯ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ಕೊಡುಗೆ ನೀಡಿದ ಸಾಧಕರನ್ನು ಗುರುತಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ.

