ಕಾಸರಗೋಡು: ಗಡಿನಾಡು ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ನೀಡಲಾಗುವ 2026ನೇ ಸಾಲಿನ ಅಂತಾರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚುಟುಕು ಸಾಹಿತ್ಯ ಕ್ಷೇತ್ರದ ಹಿರಿಯ ಸಾಧಕ ಇರಾ ಶ್ರೀ ನೇಮು ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

ನವೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಭವನದ ಕನ್ನಡ ಭುವನೇಶ್ವರಿ ವೇದಿಕೆಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂತಾರಾಜ್ಯ ಮಟ್ಟದ 10 ಮಂದಿ ಸಾಧಕರಿಗೆ ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ
ದಿ. ಮುಂಡಪ್ಪ ಪೂಜಾರಿ ಮತ್ತು ದಿ. ದುಗ್ಗಮ್ಮ ದಂಪತಿಯ ಪುತ್ರರಾದ ಇರಾ ಶ್ರೀ ನೇಮು ಪೂಜಾರಿ ಅವರು ಶಿಕ್ಷಣ, ಸಾಕ್ಷರತೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ತಂಗಡಿ, ಬಂಟ್ವಾಳ, ಎನ್.ಆರ್.ಪುರ ಸೇರಿದಂತೆ ವಿವಿಧ ತಾಲೂಕುಗಳ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು, ದಾವಣಗೆರೆಯಲ್ಲಿ ಸಹಾಯಕ ಯೋಜನಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮೂಡಿಗೆರೆಯ ಹೊಯ್ಸಳ ವಿದ್ಯಾಪೀಠದಲ್ಲಿ ಹಾಗೂ ಕಾರ್ಕಳದ ಕವಿರತ್ನಾಕರವರ್ಣಿ ವಿದ್ಯಾಪೀಠದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಅವರು, ಶಿಕ್ಷಣ ಕ್ಷೇತ್ರದ ಜೊತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಚುಟುಕು ಸಾಹಿತ್ಯ ಸಂಘಟನೆಗೆ ಮಹತ್ವದ ಕೊಡುಗೆ
ಚುಟುಕು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ವಿಶೇಷ ಆಸಕ್ತಿ ವಹಿಸಿರುವ ನೇಮು ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಭಾರ ಅಧ್ಯಕ್ಷರಾಗಿ ಒಂದು ವರ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ತಮ್ಮ ಸಾಹಿತ್ಯಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಚುಟುಕು ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿರುವ ಅವರು, ಮಂಗಳೂರು ಕಾರಾಗೃಹದಲ್ಲಿಯೂ ಕವಿಗೋಷ್ಠಿ ಆಯೋಜಿಸುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ವಿವಿಧ ವರ್ಗಗಳ ಜನರಲ್ಲಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳ ಆಯೋಜನೆಯಲ್ಲಿ ಪಾಲ್ಗೊಂಡಿದ್ದು, ಶಾಲಾ-ಕಾಲೇಜುಗಳಲ್ಲಿಯೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈವರೆಗೆ 12 ಕೃತಿಗಳನ್ನು ರಚಿಸಿದ್ದಾರೆ.

ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಗೌರವ
ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ನೇಮು ಪೂಜಾರಿ ಅವರು ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕೆಂಗಲ್ ಹನುಮಂತಯ್ಯ ರಾಜ್ಯ ಪ್ರಶಸ್ತಿ, ಇಮ್ಮಡಿ ಪುಲಕೇಶಿ ರಾಜ್ಯ ಪ್ರಶಸ್ತಿ, ಜ್ಞಾನ ಭಂಡಾರ ಪ್ರಶಸ್ತಿ, ಚುಟುಕು ನಕ್ಷತ್ರಸಿರಿ ಪ್ರಶಸ್ತಿ, ತಲಕಾವೇರಿ ಪ್ರಶಸ್ತಿ, ಸೌರಭ ಪ್ರಶಸ್ತಿ, ಸಾಹಿತ್ಯ ಸಾರ್ವಭೌಮ ಪ್ರಶಸ್ತಿ, ಕೌಸ್ತುಭ ಪ್ರಶಸ್ತಿ, ಚುಟುಕು ಸರ್ವಜ್ಞ ಪ್ರಶಸ್ತಿ, ತುಷಾರ ರತ್ನ ಪ್ರಶಸ್ತಿ, ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ಹಾಗೂ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಲಭಿಸಿವೆ.

