ಜೆಸಿಐ ವಲಯ 15ರ ‘ಆರ್ಯ’ ವಲಯ ಸಮ್ಮೇಳನ ಇಂದಿನಿಂದ ಆರಂಭ

ಮಂಗಳೂರು, ಅ.31: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಜೂನಿಯರ್ ಚೇಂಬರ್ (ಜೆಸಿಐ) ವಲಯ 15ರ 2026ನೇ ಸಾಲಿನ ‘ಆರ್ಯ’ ವಲಯ ಸಮ್ಮೇಳನವು ಜೆಸಿಐ ವಿಟ್ಲ ಹಾಗೂ ಜೆಸಿಐ ತುಂಬೆ ಎಲೈಟ್ ಆತಿಥ್ಯದಲ್ಲಿ ಇಂದು (ಅಕ್ಟೋಬರ್ 31) ಮತ್ತು ನಾಳೆ (ನವೆಂಬರ್ 1) ಅಡ್ಯಾರ್ ಗಾರ್ಡನ್‌ನ ವಿ.ಕೆ. ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಲಿದೆ.

ಎರಡು ದಿನಗಳ ಸಮ್ಮೇಳನದಲ್ಲಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸಂಜೆ, ಪ್ರಶಸ್ತಿ ಪ್ರದಾನ, ವಿವಿಧ ಜೆಸಿಐ ಘಟಕಗಳ ಸಾಧನೆಗಳಿಗೆ ಮನ್ನಣೆ ಹಾಗೂ ಮುಂದಿನ ವಲಯಾಧ್ಯಕ್ಷರ ಆಯ್ಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು ಒಂದು ಸಾವಿರ ಜೆಸಿಐ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಉದ್ಘಾಟನಾ ಸಮಾರಂಭದಲ್ಲಿ ಜೆಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿ.ಕೆ.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಜೆಸಿಐ ಆಡಳಿತ ಸಮಿತಿ ಸದಸ್ಯ ವೈ. ಸುಕುಮಾರ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸೌದಿ ಅರೇಬಿಯಾದ ‘ಅಲ್ ಮುಝೈನ್’ ಸಂಸ್ಥೆಯ ಮುಖ್ಯಸ್ಥ ಹಾಗೂ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಝಕರಿಯ ಜೋಕಟ್ಟೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೆಸಿಐ ಪೂರ್ವ ವಲಯಾಧ್ಯಕ್ಷ ಸಂಪತ್ ಬಿ. ಸುವರ್ಣ, ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಇಶಾನ್ ಆರ್. ಅಗರ್ವಾಲ್, ನಿಕಟಪೂರ್ವ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಹಾಗೂ ಜೆಎಸಿ ವಲಯಾಧ್ಯಕ್ಷ ಜಬ್ಬಾರ್ ಸಾಹೇಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದ ಅಂಗವಾಗಿ ಶಮ್ಮಿ ಲೈನ್ ಡ್ಯಾನ್ಸ್ ಅಕಾಡೆಮಿಯ ಅಂತರರಾಷ್ಟ್ರೀಯ ಕಲಾವಿದೆ ಶೆರಲೈನ್ ಸಿಕ್ವೇರಾ ಹಾಗೂ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಎಕ್ಸ್‌ಪೋ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ.

6,000 ಸದಸ್ಯರ ಬಲದ ವಲಯ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೆಸಿಐ ವಲಯ 15ರಲ್ಲಿ 60 ಘಟಕಗಳಿದ್ದು, ಸುಮಾರು 6,000 ಸದಸ್ಯರಿದ್ದಾರೆ. ತರಬೇತಿಯ ಮೂಲಕ ವ್ಯಕ್ತಿತ್ವ ವಿಕಸನದೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುವುದು ಜೆಸಿಐ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. 2026ರಲ್ಲಿ ವಿವಿಧ ಶಾಲೆ, ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ 1,200ಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಪ್ಲಾಸ್ಟಿಕ್ ಬಾಟಲ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮಾಜಕ್ಕೆ ಸುಮಾರು 10,000 ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಗಿದೆ. ‘ಕಮ್ಯುನಿಟಿ ಇಂಪ್ಯಾಕ್ಟ್’ ಕಾರ್ಯಕ್ರಮದಡಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ, ಬಸ್ ತಂಗುದಾಣಗಳ ವ್ಯವಸ್ಥೆ, ಆಸ್ಪತ್ರೆಗಳಿಗೆ ಪರೀಕ್ಷಾ ಯಂತ್ರಗಳು ಹಾಗೂ ವೀಲ್‌ಚೇರ್‌ಗಳ ಕೊಡುಗೆ ಮತ್ತು ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ಸುಮಾರು 2,000 ಯೂನಿಟ್ ರಕ್ತದಾನ ಮಾಡಲಾಗಿದೆ.

‘ಕಾಬಿಲ್’ ಕಾರ್ಯಕ್ರಮದಡಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಿವಿಧ ತರಬೇತಿಗಳನ್ನು ಆಯೋಜಿಸಲಾಗಿದೆ. ಮೂರು ಜಿಲ್ಲೆಗಳ ಆಯ್ದ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದ್ದು, ಉದ್ಯಮಶೀಲತೆ ಮತ್ತು ವ್ಯವಹಾರ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಜೆಕಾಂ ಟೇಬಲ್’ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ಸದಸ್ಯರಿಗಾಗಿ ವೆಲ್ಫೇರ್ ಫಂಡ್ ಅಡಿಯಲ್ಲಿ ಮರಣಾನಂತರದ ಆರ್ಥಿಕ ನೆರವಿನ ಸೌಲಭ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ರೂಪಿಸುವ ಕಾರ್ಯಕ್ರಮ, ವಾರ್ಷಿಕವಾಗಿ 150 ಮಕ್ಕಳಿಗೆ ಶಾಶ್ವತ ವಿದ್ಯಾರ್ಥಿವೇತನ, ವಿವಿಧ ಸಮ್ಮೇಳನಗಳ ಮೂಲಕ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಘಟಕಗಳ ಮಟ್ಟದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಗಳನ್ನೂ ವಲಯ 15 ಕೈಗೊಂಡಿದೆ.

ಸಮ್ಮೇಳನದ ಸಂಪೂರ್ಣ ಸಿದ್ಧತೆಯ ಜವಾಬ್ದಾರಿಯನ್ನು ಜೆಸಿಐ ವಿಟ್ಲದ ಪೂರ್ವಾಧ್ಯಕ್ಷ ಹಾಗೂ ಸಮ್ಮೇಳನ ನಿರ್ದೇಶಕ ರಶೀದ್ ವಿಟ್ಲ ವಹಿಸಿಕೊಂಡಿದ್ದಾರೆ. ಆತಿಥೇಯ ಘಟಕದ ಅಧ್ಯಕ್ಷ ಸಂದೀಪ್ ಹಾಗೂ ಸಹ ಆತಿಥೇಯ ಘಟಕದ ಅಧ್ಯಕ್ಷೆ ಸಮತಾ ಕಿಶೋರ್ ಸಿದ್ಧತಾ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!