ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಇನ್‌ಸ್ಟಾಮಾರ್ಟ್ ಸರಬರಾಜು ಕೇಂದ್ರದಲ್ಲಿ ಲಿಫ್ಟ್ ದುರಂತದಲ್ಲಿ ಮೃತಪಟ್ಟ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ, 28 ವರ್ಷದ ಕಾರ್ಮಿಕ ನೌಫಾಲ್ ಅವರ ಕುಟುಂಬಕ್ಕೆ ಕಂಪೆನಿಯು ₹15 ಲಕ್ಷ ಪರಿಹಾರ ನೀಡಿದೆ.

ಈ ಕುರಿತು ಎಸ್.ಡಿ.ಟಿ.ಯು (ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್) ಮಂಗಳೂರು ನಗರ ಜಿಲ್ಲಾ ಸಮಿತಿ ಪ್ರಕಟಣೆ ಹೊರಡಿಸಿದ್ದು, ಘಟನೆ ನಡೆದ ದಿನದಿಂದಲೇ ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ನಿರಂತರ ಹೋರಾಟ ನಡೆಸಲಾಗಿತ್ತು ಎಂದು ತಿಳಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಇನ್‌ಸ್ಟಾಮಾರ್ಟ್ ಸಂಸ್ಥೆಗೆ ಲಿಖಿತ ದೂರು ಸಲ್ಲಿಸಿ, ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಘಟನೆಯ ಹೊಣೆಯಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಕಂಪೆನಿಯು ಮೃತ ಕಾರ್ಮಿಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ನ್ಯಾಯದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಎಸ್.ಡಿ.ಟಿ.ಯು ಅಭಿಪ್ರಾಯಪಟ್ಟಿದೆ. ಹೋರಾಟಕ್ಕೆ ಸ್ಪಂದಿಸಿದ ಅಧಿಕಾರಿಗಳು, ಕಾರ್ಮಿಕ ಇಲಾಖೆ ಹಾಗೂ ನ್ಯಾಯಕ್ಕಾಗಿ ಧ್ವನಿಯಾಗಿದ್ದ ಎಲ್ಲರಿಗೂ ಸಂಘಟನೆ ಕೃತಜ್ಞತೆ ಸಲ್ಲಿಸಿದೆ.
ಆದರೆ, ಪರಿಹಾರ ನೀಡುವುದರೊಂದಿಗೆ ಪ್ರಕರಣ ಮುಕ್ತಾಯವಾಗುವುದಿಲ್ಲ. ರಾಜ್ಯದಾದ್ಯಂತ ಖಾಸಗಿ ಸಂಸ್ಥೆಗಳು ಹಾಗೂ ಗೋದಾಮುಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು. ಲಿಫ್ಟ್ ಸೇರಿದಂತೆ ಎಲ್ಲಾ ಯಾಂತ್ರಿಕ ಉಪಕರಣಗಳ ಸುರಕ್ಷತಾ ತಪಾಸಣೆಯನ್ನು ನಿಯಮಿತವಾಗಿ ನಡೆಸಬೇಕು. ಕಾರ್ಮಿಕರ ಜೀವಭದ್ರತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಸಂಘಟನೆ ಆಗ್ರಹಿಸಿದೆ.
ಕಾರ್ಮಿಕರ ಹಕ್ಕುಗಳು ಹಾಗೂ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮುಂದೆಯೂ ಹೋರಾಟ ಮುಂದುವರಿಸಲಾಗುವುದು ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

