ಲಕ್ಷಾಂತರ ಬಾಂಗ್ಲಾದೇಶಿಗರು ಎಲ್ಲಿದ್ದಾರೆ? ಬಿಜೆಪಿ ನಾಯಕರಿಗೆ ನಟ ಪ್ರಕಾಶ್ ರಾಜ್ ನೇರ ಸವಾಲು

ಕರ್ನಾಟಕದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರಿದ್ದಾರೆ ಎಂದವರೇ, ಆ ಜನ ಎಲ್ಲಿದ್ದಾರೆ ತೋರಿಸಿ ಎಂದು ನಟ ಪ್ರಕಾಶ್‌ ರಾಜ್‌ ಸವಾಲು ಹಾಕಿದ್ದಾರೆ.

​ದಕ್ಷಿಣ ಕನ್ನಡ ಸೇರಿದಂತೆ ಇಡೀ ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು, ಪಾಕಿಸ್ತಾನಿಗಳು ಅಕ್ರಮವಾಗಿ ನುಸುಳಿದ್ದಾರೆ ಎಂದು ಬಿಜೆಪಿ ನಾಯಕರು ಕಟ್ಟುಕಥೆ ಕಟ್ಟಿ, ದ್ವೇಷ ಬಿತ್ತಿ ಭೀತಿ ಹುಟ್ಟಿಸಿದ್ದರು. ಆದರೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು ಕೇವಲ ಇಬ್ಬರು ಮಹಿಳೆಯರು. ಲಕ್ಷಾಂತರ ನುಸುಳುಕೋರರು ಇದ್ದಾರೆ ಎಂದವರು ಈಗ ಎಲ್ಲಿದ್ದಾರೆ ಎಂದು ಹಿರಿಯ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ ರಾಜ್ ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡದ ಪ್ರತಿಯೊಬ್ಬ ಬಿಜೆಪಿ ನಾಯಕರೂ ‘ಲಕ್ಷಾಂತರ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆ, ಅದಕ್ಕಾಗಿಯೇ ಎಸ್‌ಐಆರ್‌ ಅಗತ್ಯ’ ಎಂದು ಭಾಷಣ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ನುಸುಳುಕೋರರ ಪಟ್ಟಿ ಕೇಳಿದಾಗ, ಆಯೋಗ ನೀಡಿದ 600-700 ಜನರ ಪಟ್ಟಿಯಲ್ಲಿ ಬರೀ ಇಬ್ಬರೇ ಇಬ್ಬರು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹೆಣ್ಣುಮಕ್ಕಳಿದ್ದಾರೆ. ಅವರೂ ಕೂಡ ಮದುವೆಯಾಗಿ ಇಲ್ಲಿಗೆ ಬಂದವರು. ಇನ್ನುಳಿದವರು ಸೆಕ್ಯುರಿಟಿ ಗಾರ್ಡ್‌, ರೆಸ್ಟೋರೆಂಟ್‌ ಕೆಲಸಕ್ಕೆ ಬಂದ ನೇಪಾಳಿಗಳು ಮತ್ತು ಪಾಠ ಮಾಡಲು ಬಂದ ಜರ್ಮನ್‌/ಅಮೆರಿಕನ್‌ ಪ್ರಜೆಗಳು ಎಂದು ಲೇವಡಿ ಮಾಡಿದರು.

​ಐದುವರೆ ಕೋಟಿ ಜನಸಂಖ್ಯೆ ಇರುವ ರಾಜ್ಯದಲ್ಲಿ, ಲಕ್ಷಾಂತರ ನುಸುಳುಕೋರರಿದ್ದಾರೆ ಎಂದು ಬ್ರೇನ್‌ವಾಶ್‌ ಮಾಡಿ, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲು ಮಾಡಿ, ಕೋಟಿಗೂ ಅಧಿಕ ಜನರ ಹೆಸರನ್ನು ವೋಟರ್‌ ಲಿಸ್ಟ್‌ನಿಂದ ತೆಗೆದುಹಾಕಿ ಸಾಧಿಸಿದ್ದೇನು? ಎಂದೂ ನಟ ಪ್ರಕಾಶ್ ರಾಜ್ ಪ್ರಶಿಸಿದರು.

​ಕರ್ನಾಟಕದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದ ಅವರು, ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅಂದರೆ ಹತ್ತಿರ ಹತ್ತಿರ 98 ಲಕ್ಷದಿಂದ 1 ಕೋಟಿ ಮತದಾರರ ಹೆಸರುಗಳನ್ನು ಮ್ಯಾಪಿಂಗ್ ಇಲ್ಲ ಎಂಬ ನೆಪದಲ್ಲಿ ತೆಗೆದುಹಾಕಲಾಗಿದೆ. ಸುಮಾರು 20-22 ಲಕ್ಷ ಸತ್ತವರು ಹಾಗೂ ಡಬಲ್ ಎಂಟ್ರಿಗಳನ್ನು ಹೊರತುಪಡಿಸಿದರೂ, ಇಂದಿಗೂ 70 ಲಕ್ಷಕ್ಕೂ ಅಧಿಕ ಜೀವಂತ ಮತದಾರರು ‘ಆಬ್ಸೆಂಟ್, ಶಿಫ್ಟೆಡ್, ಲಾಜಿಕಲ್ ಡಿಸ್ಕ್ರಿಪೆನ್ಸಿ’ ಹೆಸರಿನಲ್ಲಿ ಹಕ್ಕು ಕಳೆದುಕೊಂಡಿದ್ದಾರೆ ಎಂದರು.

​ಬೆಂಗಳೂರಿನಂತಹ ಮಹಾನಗರದಲ್ಲಿ ಶೇ. 50ರಷ್ಟು ಮತದಾರರನ್ನೇ ಪಟ್ಟಿಯಿಂದ ಹೊರಹಾಕಲಾಗಿದೆ. ಆಯೋಗದ ಲೆಕ್ಕಾಚಾರದಂತೆ ಬರೀ 53 ಲಕ್ಷ ಮತದಾರರಿದ್ದರೆ, ಸರ್ಕಾರ ನಗರದಲ್ಲಿ ಹೊಸ ರೋಡ್‌ಗಳನ್ನು, ಹೆಚ್ಚುವರಿ ಬಸ್‌ಗಳನ್ನು ಯಾಕೆ ತರಬೇಕು? ಇದೆಂತಹ ಹಾಸ್ಯಾಸ್ಪದ ಸಂಗತಿ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!