ಕಾಸರಗೋಡು: ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕುಗಳು ಹಾಗೂ ಮೂಲಭೂತ ಸವಲತ್ತುಗಳನ್ನು ಸಂರಕ್ಷಿಸಲು ಪ್ರತಿ ಗ್ರಾಮದಲ್ಲೂ, ಪಂಚಾಯತ್ ಮಟ್ಟದಲ್ಲಿ ಕನ್ನಡ ಜಾಗೃತಿ ಕಾರ್ಯಗಳು ನಡೆಯಬೇಕು ಎಂದು 95ರ ಹರೆಯದ ಹಿರಿಯ ಕನ್ನಡ ಹೋರಾಟಗಾರ, ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಮಾಸ್ಟರ್ ಕರೆ ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಸರಗೋಡು ನಗರದಲ್ಲಿ ಕರ್ನಾಟಕ ಸಮಿತಿ ಹಾಗೂ ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಕನ್ನಡ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಪ್ರಮುಖ ಹಕ್ಕುಗಳಲ್ಲಿ ಕನ್ನಡ ಭಾಷಾ ಸವಲತ್ತುಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಕೇರಳ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಆಡಳಿತದಲ್ಲಿರುವುದರಿಂದ ಉಭಯ ಸರ್ಕಾರಗಳು ಮನಸ್ಸು ಮಾಡಿದರೆ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದು. ಆದರೆ ಸರ್ಕಾರಗಳು ಈ ವಿಚಾರದಲ್ಲಿ ನಿರೀಕ್ಷಿತ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಗಡಿನಾಡ ಕನ್ನಡಿಗರು ಸಂಘಟಿತರಾಗಿ ಜಾಗೃತರಾಗುವ ಮೂಲಕ ಸರ್ಕಾರಗಳ ಗಮನ ಸೆಳೆಯಬೇಕು ಎಂದು ಅವರು ಹೇಳಿದರು.


ಮಹಾಜನ ವರದಿ ಇನ್ನೂ ಜೀವಂತವಾಗಿದೆ
ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಿಂದ ಕಾಸರಗೋಡಿಗೆ ಉಂಟಾದ ಅನ್ಯಾಯಕ್ಕೆ ಪರಿಹಾರ ಸೂಚಿಸಿರುವ ಮಹಾಜನ ಆಯೋಗದ ವರದಿ ಹಳೆಯದಾದರೂ ಅದರ ಅಧ್ಯಾಯ ಇನ್ನೂ ಮುಕ್ತಾಯಗೊಂಡಿಲ್ಲ. ವರದಿ ಇಂದಿಗೂ ಜೀವಂತವಾಗಿಯೇ ಇದೆ. ಆದರೆ ತಲೆಮಾರುಗಳು ಬದಲಾದಂತೆ ಕಾಸರಗೋಡಿನ ಜನತೆ ಹಾಗೂ ಇಲ್ಲಿನ ಸರ್ಕಾರಿ ನೌಕರರಲ್ಲಿ ಮಹಾಜನ ವರದಿಯ ಕುರಿತು ಎಷ್ಟರ ಮಟ್ಟಿಗೆ ಆಸಕ್ತಿ ಇದೆ ಎಂಬುದು ಪ್ರಶ್ನೆಯಾಗಿದೆ ಎಂದು ನಾರಾಯಣ ಗಟ್ಟಿ ಮಾಸ್ಟರ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳಕ್ಕುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡದ ವಾತಾವರಣ, ಸಂದರ್ಭ ಹಾಗೂ ಹಿನ್ನೆಲೆ ಬದಲಾಗುತ್ತಿದೆ. ಜನರು ಕನ್ನಡಿಗರಾಗಿದ್ದರೂ ಭಾಷಾಭಿಮಾನ ಕ್ಷೀಣಿಸುತ್ತಿದೆ. ಕನ್ನಡವನ್ನು ಪ್ರೀತಿಸುವ ಮನೋಭಾವ ಬೆಳೆದಾಗ ಮಾತ್ರ ಭಾಷಾ ಹಕ್ಕುಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಪ್ರತಿಭಟಿಸುವ ಶಕ್ತಿ ಮೂಡುತ್ತದೆ. ಬದಲಾದ ಕಾಲಘಟ್ಟದಲ್ಲಿ ಕನ್ನಡದ ವಾತಾವರಣ ನಿರ್ಮಿಸುವ ಜಾಗೃತಿ ಅತ್ಯಂತ ಅನಿವಾರ್ಯವಾಗಿದೆ ಎಂದರು.

ಸಮಾವೇಶದ ಧ್ಯೇಯ ಮತ್ತು ಧೋರಣೆಗಳನ್ನು ವಿವರಿಸಿ ಕೆ. ಭಾಸ್ಕರ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಬೇಳ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ವರಪ್ರಸಾದ ಕೋಟೆಕಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಾಜೇಂದ್ರ ಕಲ್ಲೂರಾಯ ಎಡನೀರು, ಗಮಕ ಕಲಾ ಪರಿಷತ್ನ ಟಿ. ಶಂಕರ ನಾರಾಯಣ ಭಟ್, ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ, ಗಣೇಶ ಪ್ರಸಾದ ಪಾಣೂರು, ಶಿವರಾಮ ಕಾಸರಗೋಡು, ನಿರಂಜನ ಕೊರಕ್ಕೋಡು, ರಾಧಾಕೃಷ್ಣ ಕೆ. ಉಳಿಯತಡ್ಕ, ಸೂರ್ಯಭಟ್ ಎಡನೀರು, ಮುಹಮ್ಮದಾಲಿ ಪೆರ್ಲ, ಆಯೇಷಾ ಪೆರ್ಲ, ಲೋಕೇಶ್ ಎಂ.ಬಿ. ಆಚಾರ್ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

