ಮಂಗಳೂರು: ಕೊಂಕಣಿ ಸಂಗೀತ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ಸುದೀರ್ಘ ಬಹು-ಗಾಯಕರ ಗಾಯನ ಮಾರಥಾನ್ ಯಶಸ್ವಿಯಾಗಿ 35 ಗಂಟೆಗಳ ನಿರಂತರ ಗಾಯನವನ್ನು ಪೂರ್ಣಗೊಳಿಸಿದೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನವಾಗಿ ನಡೆಯುತ್ತಿರುವ ಈ ಸಂಗೀತ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವರ್ಷದ ರೂಬಿ ಜುಬಿಲಿ ಸಂಭ್ರಮ ಹಾಗೂ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಅಂಗವಾಗಿ ಮಂಗಳೂರಿನ ಟೌನ್ ಹಾಲ್ನಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನವೆಂಬರ್ 15ರವರೆಗೆ ಒಟ್ಟು 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ನಿರಂತರವಾಗಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.
ಸಾಧನೆಯ ಎರಡನೇ ದಿನದ ವೇಳೆಗೆ ಕರಾವಳಿ ಕರ್ನಾಟಕ, ಉತ್ತರ ಕನ್ನಡ ಹಾಗೂ ಗೋವಾ ಸೇರಿದಂತೆ ವಿವಿಧ ಪ್ರದೇಶಗಳ 35 ಸಂಗೀತ ತಂಡಗಳು ವೇದಿಕೆಯಲ್ಲಿ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿವೆ.

ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಕಟ್ಟುನಿಟ್ಟಿನ ನಿಯಮಾವಳಿಗಳ ಪ್ರಕಾರ, ಸುಮಾರು 300 ಗಂಟೆಗಳ ಈ ಸುದೀರ್ಘ ಗಾಯನ ಪಯಣದಲ್ಲಿ ಯಾವುದೇ ಹಾಡು ಅಥವಾ ಗಾಯಕರ ಪುನರಾವರ್ತನೆಗೆ ಅವಕಾಶವಿಲ್ಲ. ಈ ಸವಾಲಿನ ನಡುವೆಯೂ ವಿವಿಧ ಪ್ರದೇಶಗಳ ಗಾಯಕರ ತಂಡಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಈ ಸಂಗೀತ ಮಹಾಯಜ್ಞಕ್ಕೆ ಕೊಂಕಣ ಪ್ರದೇಶದಾದ್ಯಂತದ ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಆಗಮಿಸಿ ಕಲಾವಿದರನ್ನು ಹುರಿದುಂಬಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸುವ ಈ ಪ್ರಯತ್ನವು ವಿವಿಧ ಕೊಂಕಣಿ ಭಾಷಿಕ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ್ದು, ಹೊಸ ಗಿನ್ನೆಸ್ ವಿಶ್ವ ದಾಖಲೆಯ ನಿರೀಕ್ಷೆಯನ್ನು ಮೂಡಿಸಿದೆ.

