ಕಾಸರಗೋಡು: ಊಟ ಮುಗಿಸಿ ಮನೆಯೊಳಗೆ ಮಲಗಿದ್ದ ಬ್ಯಾಂಕ್ ಅಪ್ರೈಸರ್ ಒಬ್ಬರ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತರನ್ನು ಕೆನರಾ ಬ್ಯಾಂಕ್‌ನ ಬೇಕಲ ಪಳ್ಳಿಕೆರೆ ಶಾಖೆಯ ಅಪ್ರೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೂಡ್ಲು ಪೆರ್ನಡ್ಕ ನಿವಾಸಿ ಬಿ.ಎಂ. ಗಿರೀಶ್ ಕುಮಾರ್ (48) ಎಂದು ಗುರುತಿಸಲಾಗಿದೆ.

ಗುರುವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ ಗಿರೀಶ್ ಕುಮಾರ್ ಊಟ ಮಾಡಿ ನಿದ್ರೆಗೆ ಜಾರಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಅವರು ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಬಳಿಕ ಹುಡುಕಾಟ ನಡೆಸಿದಾಗ ಕಾಸರಗೋಡಿನ ಅಡ್ಕತ್ತಬೈಲು ರೈಲ್ವೆ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಈ ಸಂಬಂಧ ಕಾಸರಗೋಡು ಟೌನ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತರು ಹರೀಶ್ ಆಚಾರ್ಯ ಮತ್ತು ಪುಷ್ಪಲತಾ ದಂಪತಿಯ ಪುತ್ರ. ಪತ್ನಿ ಮಮತಾ ಗೌರಿ ಹಾಗೂ ನಮತಾ ಎಂಬ ಪುತ್ರಿಯನ್ನು ಅಗಲಿದ್ದಾರೆ. ದಿವಂಗತ ದೀಕ್ಷಿತ್ ಮತ್ತೊಬ್ಬ ಪುತ್ರ.
ಚರಣ್ ಕುಮಾರ್, ಲಕ್ಷ್ಮೀಶ, ಸದಾನಂದ, ಅನುರಾಧ ಮತ್ತು ಹೇಮಲತಾ ಸಹೋದರ-ಸಹೋದರಿಯರು.

