ಕಾಸರಗೋಡು : ಚೆರುವತ್ತೂರು ಟೆಕ್ನಿಕಲ್ ಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿ ನೀರಜ್ ಸಂತೋಷ್ (15) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕು ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಆಯೋಗ ಈ ಕ್ರಮ ಕೈಗೊಂಡಿದೆ.

ಈ ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಹಾಗೂ ಜಿಲ್ಲಾ ಶಿಶು ಸಂರಕ್ಷಣಾ ಅಧಿಕಾರಿಗೆ ಆಯೋಗವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮೃತ ವಿದ್ಯಾರ್ಥಿಯ ಪೋಷಕರು ಶಾಲಾ ಅಧಿಕಾರಿಗಳು ಮತ್ತು ಅಧ್ಯಾಪಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಶಾಲೆಯ ಕೆಲವರ ನಡವಳಿಕೆಯಿಂದ ಉಂಟಾದ ತೀವ್ರ ಮಾನಸಿಕ ಒತ್ತಡವೇ ಮಗನ ಸಾವಿಗೆ ಕಾರಣವೆಂದು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ನೈಜ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕನ ತಂದೆ-ತಾಯಿ ಹೊಸದುರ್ಗ ಡಿವೈಎಸ್ಪಿಗೆ ಅಧಿಕೃತ ದೂರು ನೀಡಿದ್ದಾರೆ.

