ನವದೆಹಲಿ: ಸರ್ಕಾರಿ ಅಧಿಕಾರಿಗಳು 48 ಗಂಟೆಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ, ಯಾವುದೇ ಪ್ರತ್ಯೇಕ ಅಮಾನತು ಆದೇಶವಿಲ್ಲದೆಯೇ ಅವರು ಕಾನೂನುಬದ್ಧವಾಗಿ ಅಮಾನತುಗೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಧಿಕಾರಿಯು 48 ಗಂಟೆಗಳ ನ್ಯಾಯಾಂಗ ಬಂಧನವನ್ನು ಪೂರ್ಣಗೊಳಿಸಿದ ಕ್ಷಣದಿಂದಲೇ ಅಮಾನತು ಜಾರಿಗೆ ಬರುತ್ತದೆ. ಇದಕ್ಕಾಗಿ ಪ್ರತ್ಯೇಕ ವಿಚಾರಣೆ ಅಥವಾ ಆರೋಪಪಟ್ಟಿಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬಿಹಾರದ ಸಮಸ್ತಿಪುರ ಸದರ್ ಆಸ್ಪತ್ರೆಯ ಮ್ಯಾನೇಜರ್ ಭಾಗಿಯಾಗಿದ್ದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಬಂಧನಕ್ಕೊಳಗಾಗಿದ್ದ ಅಧಿಕಾರಿ ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ಆದರೆ, ಅಧಿಕಾರಿಯ ಅಮಾನತು ಆದೇಶವನ್ನು ರದ್ದುಗೊಳಿಸಿ, ಅವರನ್ನು ಮತ್ತೆ ಅದೇ ಆಸ್ಪತ್ರೆಯಲ್ಲಿ ನೇಮಕ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.ಅಧಿಕಾರಿಯು ನ್ಯಾಯಾಂಗ ಬಂಧನಕ್ಕೆ ಒಳಗಾದ ವಿಷಯ ತಿಳಿದ ತಕ್ಷಣವೇ ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರವು ಅಮಾನತು ಪ್ರಕ್ರಿಯೆಗೆ ಸಂಬಂಧಿಸಿದ ಅಧಿಕೃತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಅಲ್ಲದೆ, ಅಧಿಕಾರಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರೂ ಅಮಾನತು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. ಸಂಬಂಧಪಟ್ಟ ಪ್ರಾಧಿಕಾರವು ಅಮಾನತು ಹಿಂಪಡೆಯುವ ಪ್ರತ್ಯೇಕ ಆದೇಶ ಹೊರಡಿಸುವವರೆಗೆ ಅಮಾನತು ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

