ಮಂಜೇಶ್ವರ : ಗೋವಿಂದ ಪೈ ಕಾಲೇಜು ಸಮೀಪ ಬಾನುವಾರ ಸಂಜೆ ನಡೆದ ಅಪಘಾತದಲ್ಲಿ ಅತಿವೇಗವಾಗಿ ಬಂದ ಕಾರೊಂದು ತಾಯಿ ಮತ್ತು ಪುತ್ರಿಗೆ ಢಿಕ್ಕಿಹೊಡೆದಿದ್ದು, ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ.

ಪಾವೂರು ಗೇರುಕಟ್ಟೆಯ ಶಾಂಭವಿ (68) ಮತ್ತು ಪುತ್ರಿ ಸುಚಿತ್ರ (48) ಗಾಯಗೊಂಡವರಾಗಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯೊಂದರ ಕೆಲಸದ ನಿಮಿತ್ತ ತೆರಳಿದ್ದ ಮೂವರು, ಮಾತುಕತೆ ಮುಗಿಸಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇವರ ಜೊತೆಗಿದ್ದ ಮೊಮ್ಮಗ ಯಾವುದೇ ಗಾಯಗಳಿಲ್ಲದೆ ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಢಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಪರಾರಿಯಾಗಿತ್ತು. ಸ್ಥಳೀಯರ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ತನಿಖೆ ನಡೆಸಿ, ಅಪಘಾತವೆಸಗಿದ ಕಾರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ ಚಾಲಕನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

