

ಕಾಸರಗೋಡು : ಕಣ್ಣೂರು ಜಿಲ್ಲೆಯ ಪೆರಿಂಗತ್ ನಿವಾಸಿ, 17 ವರ್ಷ ಹರೆಯದ ಶಿವಸೂರ್ಯ ಎಂಬ ಬಾಲಕ ಮೂರು ತಿಂಗಳ ಹಿಂದೆ ಮೊಬೈಲ್ ಫೋನ್ ಹಿಡಿದುಕೊಂಡು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾನೆ. ಕಾಶಿಗೆ ಹೋಗುವುದಾಗಿ ಬರೆದಿಟ್ಟ ಪತ್ರ ಮನೆಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಚೋಕ್ಲಿ ಪೊಲೀಸರು ತನಿಖೆ ನಡೆಸಿದ್ದರು.

ನಂತರ ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದ ಪ್ರತ್ಯೇಕ ತನಿಖಾ ತಂಡವು ಕೇರಳದಾದ್ಯಂತ, ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಾರಣಾಸಿ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಗಳಲ್ಲೂ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಕ್ರೈಂ ಬ್ರಾಂಚ್ ಈಗ ಬಾಲಕನ ಪತ್ತೆಗಾಗಿ ‘ಲುಕ್ಔಟ್’ ನೋಟೀಸ್ ಹೊರಡಿಸಿದ್ದು, ತನಿಖೆಯನ್ನು ಕಾಶಿಗೂ ವಿಸ್ತರಿಸಲು ಮುಂದಾಗಿದೆ.


