ಮಂಜೇಶ್ವರ – ನೂತನವಾಗಿ ನಿರ್ಮಾಣಗೊಂಡ ತಲಪಾಡಿ–ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿ (ಷಟ್ಪಥ ರಸ್ತೆ)ಯ ಮಂಜೇಶ್ವರ ವಾಮಂಜೂರು ಚೆಕ್ಪೋಸ್ಟ್ ಸಮೀಪದ ಸೇತುವೆ ಭಾಗವನ್ನು ಮಾತ್ರ ಧ್ವಿಪಥ ರಸ್ತೆಗೆ ಸೀಮಿತಗೊಳಿಸಿ ನಿರ್ಮಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸರ್ವೀಸ್ ರಸ್ತೆ ಕೂಡಾ ಅಳವಡಿಕೆ ಮಾಡದೇ ಇರುವ ನಿರ್ಲಕ್ಷ್ಯ ಕಾಮಗಾರಿ ಜನರ ದಿನನಿತ್ಯದ ಸಂಚಾರಕ್ಕೆ ಭಾರೀ ತೊಂದರೆಯನ್ನು ಉಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಶ್ರೇಣಿಯೊಳಗೆ ಹೆಚ್ಚಿನ ಭಾಗಗಳನ್ನು ಷಟ್ಪಥ ರೀತಿಯಲ್ಲಿ ರೂಪಿಸಲಾಗಿದ್ದು, ಆದರೆ ಮಂಜೇಶ್ವರ ಚೆಕ್ಪೋಸ್ಟ್ ಸಮೀಪದ ಸೇತುವೆ ಪ್ರದೇಶದಲ್ಲಿ ಮಾತ್ರ ದ್ವಿಪಥ ರಸ್ತೆ ರೂಪುಗೊಂಡಿದ್ದು ತೀವ್ರ ಭದ್ರತಾ ಮತ್ತು ಸಂಚಾರದ ಅವ್ಯವಸ್ಥೆಗೆ ಕಾರಣವಾಗುತ್ತಿದೆ.
ಸ್ಥಳೀಯ ನಿವಾಸಿಗಳು ಮತ್ತು ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನಚಾಲಕರು ಈ ಭಾಗದಲ್ಲಿ ಸಂಚಾರ ದಟ್ಟಣೆಯಿಂದಾಗಿ ಉಂಟಾಗುವ ವಿಳಂಬ ಹಾಗೂ ಅಪಘಾತದ ಅಪಾಯಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪಕ್ಕದ ಕಡೆ ಸರ್ವೀಸ್ ರಸ್ತೆ ಇಲ್ಲದ ಕಾರಣ, ಅತಿ ಹೆಚ್ಚು ಸಂಚಾರ ದಬ್ಬಾಳಿಕೆ ಮುಖ್ಯ ರಸ್ತೆಯಲ್ಲಿಯೇ ಜಮೆಯಾಗುತ್ತಿದೆ.
ಸೇತುವೆ ಭಾಗದ ದ್ವಿಪಥವನ್ನು ಕೂಡ ಷಟ್ಪಥದೊಂದಿಗೆ ಸಮಾನಗೊಳಿಸಬೇಕು.ಸೂಕ್ತವಾದ ಸರ್ವೀಸ್ ರಸ್ತೆಗಳ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು.
ಸಂಚಾರ ನಿಯಂತ್ರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆಯಿಂದ ಯೋಜನೆ ಪರಿಷ್ಕರಿಸಬೇಕಾಗಿದೆ
ಸಾರ್ವಜನಿಕರು ಇದನ್ನು ತಾತ್ಕಾಲಿಕವಾಗಿ ಸಹಿಸಿಕೊಳ್ಳಲು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಹುಪಾಲು ಮಂದಿ ಕಾಮಗಾರಿಯ ಈ ರೀತಿಯ ಅವೈಜ್ಞಾನಿಕ ವಿನ್ಯಾಸವನ್ನು ಖಂಡಿಸಿದ್ದಾರೆ.
ವ್ಯವಸ್ಥಿತ ಯೋಜನೆಗಳಿಲ್ಲದೆ ನಡೆಸಿದ ಕಾಮಗಾರಿಯ ಪರಿಣಾಮವಾಗಿ ಜನ ಸಾಮಾನ್ಯರ ಸುರಕ್ಷತೆ ಮತ್ತು ದಿನನಿತ್ಯದ ಸಂಚಾರದಲ್ಲಿ ತೊಂದರೆ ಉಂಟಾಗಿರುವುದು ಬೇಸರದ ಸಂಗತಿ. ಈ ಬಗ್ಗೆ ಸಂಬಂಧಿತ ಇಲಾಖೆ ಗಂಭೀರ ಗಮನಹರಿಸಿ, ತ್ವರಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯ.