ನ.25ರಂದು ಕೋಳಿ ಬೆಳೆಗಾರರಿಂದ ವಿಧಾನಸೌಧ ಚಲೋ

ಮಂಗಳೂರು: ಕೋಳಿ ಸಾಕಾಣಿಕೆದಾರರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟ, ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನ.25ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಎಸ್. ಸುವರ್ಣ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಳಿ ಸಾಕಾಣಿಕೆದಾರರಿಗೆ ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಸುವಂತೆ ಇಂಟಿಗ್ರೇಶನ್ ಕಂಪೆನಿಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು. ಉದ್ಯಮದ ಸಮಗ್ರ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಕರ್ನಾಟಕ ಕೋಳಿ ನಿಯಂತ್ರಣ ಹಾಗೂ ಅಭಿವೃದ್ಧಿ ಮಂಡಳಿ ರಚಿಸಬೇಕು. ಕೆಎಂಎಫ್ ಮಾದರಿಯಲ್ಲಿ ಕೋಳಿ ಸಾಕಾಣಿಕೆ ಸಹಕಾರ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

2026ರ ಮೇ ತಿಂಗಳಲ್ಲಿ ಸರ್ಕಾರ ಅನುಮೋದಿಸಿರುವ ಪ್ರತಿ ಕೆ.ಜಿ.ಗೆ 10 ರೂ. ಸಾಕಾಣಿಕೆ ದರವನ್ನು ತಕ್ಷಣ ಜಾರಿಗೊಳಿಸುವಂತೆ ಪಶುಸಂಗೋಪನಾ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಹಾಲಿನ ದರ ಏರಿಕೆಯಾದ ಕೆಲವೇ ದಿನಗಳಲ್ಲಿ ಹೈನುಗಾರರಿಗೆ ಹೆಚ್ಚುವರಿ ಹಣ ದೊರೆಯುತ್ತದೆ. ಆದರೆ ಕೋಳಿ ಸಾಕಾಣಿಕೆ ವೆಚ್ಚ ಹೆಚ್ಚಳದ ಆದೇಶ ಹೊರಡಿಸಿ ಆರು ತಿಂಗಳು ಕಳೆದರೂ ಇನ್ನೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಪ್ಪಂದದ ಆಧಾರದಲ್ಲಿ ಕೋಳಿ ಸಾಕುವ ರೈತರು ಮತ್ತು ಪೂರೈಕೆ ಕಂಪೆನಿಗಳ ನಡುವಿನ ಸಮಸ್ಯೆ ಪರಿಹರಿಸಲು ಪಶುಸಂಗೋಪನಾ ಸಚಿವರು ಹಾಗೂ ಕುಕ್ಕುಟ ಮಂಡಳಿ ಅಧ್ಯಕ್ಷರು ನಡೆಸಿದ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ನ.25ರಿಂದ ರಾಜ್ಯಾದ್ಯಂತ ಕೋಳಿ ಸಾಕಾಣಿಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲೂ ಸಾಕಾಣಿಕೆ ಸ್ಥಗಿತಗೊಳಿಸಲಾಗುವುದು. ನ.24ರೊಳಗೆ ಕಂಪೆನಿಗಳು ಕನಿಷ್ಠ ಸಾಕಾಣಿಕೆ ದರ ಜಾರಿಗೊಳಿಸದಿದ್ದರೆ ರಾಜ್ಯದ ಕೋಳಿ ಬೆಳೆಗಾರರು ಒಗ್ಗಟ್ಟಾಗಿ ಕಂಪೆನಿಗಳ ವಿರುದ್ಧ ತೀವ್ರ ಹೋರಾಟ ನಡೆಸಲಿದ್ದಾರೆ. ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಮುಂದಾಗಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಹಾಗೂ ಕೋಶಾಧಿಕಾರಿ ಸನತ್ ಮುಳುಗಾಡು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!