ವಿಶೇಷ ಅಗತ್ಯವುಳ್ಳ 60 ಮಕ್ಕಳಿಗೆ ‘ಇಂಟ್ಯೂಷನ್ ಪ್ರೊಸೆಸ್’ ತರಬೇತಿ

ಮಂಗಳೂರು: ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ಘಟಕದ ವತಿಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಮೂರು ದಿನಗಳ ‘ಇಂಟ್ಯೂಷನ್ ಪ್ರೊಸೆಸ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಶಿಕ್ಷಕರ ಸಂಯೋಜಕಿ ಶರಾವತೀ ರವಿನಾರಾಯಣ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿಯ ಪ್ರಯುಕ್ತ ಜ್ಞಾನದ ಉಡುಗೊರೆ ನೀಡುವ ಉದ್ದೇಶದಿಂದ ಈ ವಿಶೇಷ ಸೇವಾ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಸೇವಾ ಭಾರತಿ ಮಂಗಳೂರು ನಿರ್ವಹಿಸುತ್ತಿರುವ ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ ಹಾಗೂ ರೋಮನ್ ಆ್ಯಂಡ್ ಕ್ಯಾಥರೀನ್ ಲೋಬೋ ಸ್ಕೂಲ್ ಫಾರ್ ದಿ ಬ್ಲೈಂಡ್‌ನ ಸುಮಾರು 60 ಮಕ್ಕಳಿಗೆ ನ.17ರಿಂದ 20ರವರೆಗೆ ತರಬೇತಿ ನೀಡಲಾಯಿತು. ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಅಂತಾರಾಷ್ಟ್ರೀಯ ಬೋಧಕ ರಾಜೇಂದ್ರ ಸಿಂಗ್ ಗಾಂಧಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು ಎಂದರು.

ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ರವಿಶಂಕರ್ ಅವರು ಈ ಕಾರ್ಯಕ್ರಮವನ್ನು ಶಿಕ್ಷಣ ಕ್ಷೇತ್ರದ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ಮಕ್ಕಳಲ್ಲಿ ಒತ್ತಡ ನಿವಾರಣೆ, ಏಕಾಗ್ರತೆ, ಅರಿವು ಮತ್ತು ಜ್ಞಾಪಕಶಕ್ತಿ ವೃದ್ಧಿಸುವುದರ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಯೋಜನೆಯ ಭಾಗವಾಗಿ ಚೇತನ ಕೇಂದ್ರದ ಸಿಬ್ಬಂದಿ ಹಾಗೂ ಪೋಷಕರಿಗೂ ಹ್ಯಾಪಿನೆಸ್ ಪ್ರೋಗ್ರಾಂ ಆಯೋಜಿಸಲಾಗಿತ್ತು. ಈ ವೇಳೆ ಸುದರ್ಶನ ಕ್ರಿಯಾ ಸೇರಿದಂತೆ ಲಯಬದ್ಧ ಉಸಿರಾಟದ ತಂತ್ರಗಳನ್ನು ಕಲಿಸಲಾಯಿತು. ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ ಸುಧಾರಣೆ ಹಾಗೂ ಸಂತೋಷದಾಯಕ ಮತ್ತು ಸಮತೋಲಿತ ಜೀವನಕ್ಕೆ ಅಗತ್ಯವಾದ ಅಭ್ಯಾಸಗಳನ್ನು ಪರಿಚಯಿಸಲಾಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ರಜನಿ ರೈ, ಅಮಿತಾ ಸುಧೀರ್, ಪ್ರಜ್ವಲ್ ಸುವರ್ಣ ಹಾಗೂ ಅಮರ್ ಮಲ್ಯ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!