ಉಪ್ಪಳ :ಪುಟ್ಟ ವಯಸ್ಸಿನಲ್ಲೇ ಉದಾತ್ತ ಆಲೋಚನೆ, ಮಾನವೀಯ ಕಾಳಜಿ ಹಾಗೂ ಪರೋಪಕಾರದ ಮನೋಭಾವವನ್ನು ಮೆರೆದ ಬಾಲಕನೊಬ್ಬ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.


ಕುಬಣೂರಿನ ಎಸ್.ಆರ್.ವಿ.ಯು.ಪಿ. ಶಾಲೆಯ ಯುಕೆಜಿ ತರಗತಿಯಲ್ಲಿ ಕಲಿಯುತ್ತಿರುವ ಹರೀಶ್ ಮತ್ತು ಪೂರ್ಣಿಮಾ ಬೇಕೂರು ದಂಪತಿಯ ಪುತ್ರ ಧ್ಯಾನ್ ಕೃಷ್ಣ, ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ನೆರವಾಗುವ ಸದುದ್ದೇಶದಿಂದ ತನ್ನ ಕೂದಲನ್ನು ದಾನ ಮಾಡುವ ಮೂಲಕ ಮಾನವೀಯತೆಯ ಅಪೂರ್ವ ಸಂದೇಶ ಸಾರಿದ್ದಾನೆ.


ಬಾಲ್ಯದಲ್ಲಿಯೇ ಇಂತಹ ಉದಾತ್ತ ಆಲೋಚನೆ ಬೆಳೆಸಿಕೊಂಡಿರುವ ಧ್ಯಾನ್ ಕೃಷ್ಣನ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಗುವಿನ ಈ ಉದಾರ ಮನಸ್ಸಿನ ಹಿಂದೆ ಹೆತ್ತವರಾದ ಹರೀಶ್ ಮತ್ತು ಪೂರ್ಣಿಮಾ ಅವರ ಪ್ರೋತ್ಸಾಹ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳೂ ಪ್ರಮುಖ ಪಾತ್ರ ವಹಿಸಿವೆ.
ತನ್ನ ಕೂದಲನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಬದುಕಿನಲ್ಲಿ ಭರವಸೆಯ ಕಿರಣ ಮೂಡಿಸಲು ಮುಂದಾದ ಈ ಪುಟ್ಟ ಬಾಲಕನ ಕಾರ್ಯಕ್ಕೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಮಕ್ಕಳಿಗೆ ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ಮಾನವೀಯತೆ, ಕರುಣೆ ಹಾಗೂ ಪರೋಪಕಾರದ ಮೌಲ್ಯಗಳನ್ನು ಕಲಿಸಿಕೊಡುವುದೇ ನಿಜವಾದ ಶಿಕ್ಷಣ ಎಂಬುದಕ್ಕೆ ಧ್ಯಾನ್ ಕೃಷ್ಣನ ಈ ಕಾರ್ಯ ಸಾಕ್ಷಿಯಾಗಿದೆ.

ಇಂತಹ ಉದಾತ್ತ ಕಾರ್ಯದ ಮೂಲಕ ಸಮಾಜಕ್ಕೆ ಮಾನವೀಯತೆಯ ಸಂದೇಶ ಸಾರಿದ ಪುಟ್ಟ ಬಾಲಕ ಧ್ಯಾನ್ ಕೃಷ್ಣ ಹಾಗೂ ಆತನಿಗೆ ಉತ್ತಮ ಸಂಸ್ಕಾರ ನೀಡಿದ ಹೆತ್ತವರಾದ ಹರೀಶ್ ಮತ್ತು ಪೂರ್ಣಿಮಾ ಬೇಕೂರು ದಂಪತಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

