ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಸೋಟ್ ಜುಮಾ ಮಸೀದಿಗೆ ಹೊಂದಿಕೊಂಡಿರುವ ಮಖಾಂನಲ್ಲಿ ಕಳ್ಳತನ ನಡೆದಿದೆ. ಮಖಾಂನೊಳಗೆ ಇರಿಸಲಾಗಿದ್ದ ಗೋದ್ರೇಜ್ ಲಾಕರ್ ಒಡೆದು ಸುಮಾರು 50 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ.

ಘಟನೆಗೆ ಸಂಬಂಧಿಸಿ ಮಸೀದಿ ಅಧ್ಯಕ್ಷ ಆರ್.ಕೆ. ಬಾವ ಹಾಜಿ ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಐದನೇ ಕಳ್ಳತನ ಇದಾಗಿದೆ. ಇತ್ತೀಚೆಗಷ್ಟೇ ವಾಮಂಜೂರಿನ ಮಖಾಂನಲ್ಲಿ ಇರಿಸಲಾಗಿದ್ದ ಕಾಣಿಕೆ ಡಬ್ಬಿಯನ್ನೂ ಕಳ್ಳರು ಕದ್ದೊಯ್ದಿದ್ದರು.

ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಸ್ಥಳೀಯ ಭಕ್ತರು ಹಾಗೂ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿಗಳಲ್ಲಿ ಆತಂಕ ಮೂಡಿಸಿವೆ.

