ನ.29ರಂದು ಉಡುಪಿಯಲ್ಲಿ ಭವ್ಯ ಶ್ರೀ ಮಹಾಧನ್ವಂತರಿ ಯಾಗ; 15 ಸಾವಿರ ಭಕ್ತರು ಭಾಗವಹಿಸುವ ನಿರೀಕ್ಷೆ

ಮಂಗಳೂರು: ಆರೋಗ್ಯ ಸಂಪನ್ನ ಸಮಾಜ ನಿರ್ಮಾಣ, ರಾಷ್ಟ್ರದ ಸುರಕ್ಷತೆ, ಲೋಕಕಲ್ಯಾಣ ಹಾಗೂ ಸಮಾಜದ ಶಾರೀರಿಕ ಮತ್ತು ಮಾನಸಿಕ ಕಷ್ಟಗಳ ನಿವಾರಣೆಯ ಸಂಕಲ್ಪದೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ 29ರಂದು ಉಡುಪಿಯಲ್ಲಿ ಭವ್ಯ ಶ್ರೀ ಮಹಾಧನ್ವಂತರಿ ಯಾಗ ಆಯೋಜಿಸಲಾಗಿದೆ.

ಉಡುಪಿಯ ಕುಂಜಿಬೆಟ್ಟಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಯಾಗ ನಡೆಯಲಿದೆ. ಈಗಾಗಲೇ 9 ಸಾವಿರಕ್ಕೂ ಅಧಿಕ ಭಕ್ತರು ಉಚಿತವಾಗಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಯಾಗದ ಆಯೋಜನಾ ಸಮಿತಿಯ ಸಂಯೋಜಕ ಗುರುಪ್ರಸಾದ ಗೌಡ ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾಗದ ವಿಶೇಷ ಆಕರ್ಷಣೆಯಾಗಿ ಪ್ರಾಚೀನ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ರಿ.ಶ. 1026ರಲ್ಲಿ ಮಹಮ್ಮದ್ ಗಝನಿ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಸಂದರ್ಭದಲ್ಲಿ ದೇವಾಲಯದ ಜ್ಯೋತಿರ್ಲಿಂಗದ ಕೆಲವು ಭಾಗಗಳನ್ನು ಅರ್ಚಕರು ಸಂರಕ್ಷಿಸಿದ್ದರು ಎನ್ನಲಾಗಿದೆ. ನೂರಾರು ವರ್ಷಗಳಿಂದ ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದಿದ್ದ ಈ ಅವಶೇಷಗಳನ್ನು ತಂಜಾವೂರಿನ ವೇದಕುಲಪತಿ ಜಿ.ಕೆ. ಸೀತಾರಾಮನ್ ಗುರೂಜಿ ಜಗತ್ತಿಗೆ ಪರಿಚಯಿಸಿದ್ದಾರೆ. ಈ ಪವಿತ್ರ ಅವಶೇಷಗಳ ಪೈಕಿ ನಾಲ್ಕನ್ನು ಸನಾತನ ಸಂಸ್ಥೆಗೆ ಹಸ್ತಾಂತರಿಸಲಾಗಿದ್ದು, ಅವುಗಳನ್ನು ಉಡುಪಿಯ ಯಾಗದ ಸಂದರ್ಭದಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುವುದು ಎಂದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂಜ್ಯ ರಮಾನಂದ ಗೌಡ ಮಾತನಾಡಿ, ಭಗವಾನ್ ಶ್ರೀ ಧನ್ವಂತರಿಯು ಮಹಾವಿಷ್ಣುವಿನ ಅವತಾರವಾಗಿದ್ದು, ಆಯುರ್ವೇದದ ಅಧಿದೇವತೆ ಹಾಗೂ ಸಮಸ್ತ ಜೀವಿಗಳಿಗೆ ಆರೋಗ್ಯ ಕರುಣಿಸುವ ದೇವರಾಗಿದ್ದಾರೆ. ಧನ್ವಂತರಿ ದೇವರ ಆರಾಧನೆಯು ಆರೋಗ್ಯ, ಆಯುಷ್ಯ ಮತ್ತು ಲೋಕಕಲ್ಯಾಣದ ಸಂಕಲ್ಪವನ್ನು ಒಳಗೊಂಡಿದೆ. ಪ್ರಸ್ತುತ ಜಗತ್ತು ಸಾಂಕ್ರಾಮಿಕ ರೋಗಗಳು, ಹವಾಮಾನ ವೈಪರೀತ್ಯ, ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಆಹಾರ ಭದ್ರತೆಯ ಆತಂಕ ಹಾಗೂ ಜಾಗತಿಕ ಸಂಘರ್ಷಗಳಂತಹ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾನವಕುಲದ ಆರೋಗ್ಯ, ಪ್ರಕೃತಿಯ ಸಮತೋಲನ, ಆಹಾರ ಸಮೃದ್ಧಿ ಮತ್ತು ರಾಷ್ಟ್ರದ ಸುರಕ್ಷತೆಗಾಗಿ ಸಾಮೂಹಿಕ ಪ್ರಾರ್ಥನೆ ಅಗತ್ಯವಾಗಿದೆ ಎಂದರು.

ಯಾಗವೆಂದರೆ ಕೇವಲ ಅಗ್ನಿಗೆ ಆಹುತಿ ನೀಡುವ ಧಾರ್ಮಿಕ ವಿಧಿಯಲ್ಲ. ವೇದಮಂತ್ರಗಳ ಉಚ್ಚಾರಣೆ, ದೇವತಾರಾಧನೆ, ತ್ಯಾಗ ಮತ್ತು ಸಾಮೂಹಿಕ ಸಂಕಲ್ಪದ ಮೂಲಕ ಸರ್ವರ ಕಲ್ಯಾಣವನ್ನು ಪ್ರಾರ್ಥಿಸುವ ಸನಾತನ ಧರ್ಮದ ಪ್ರಾಚೀನ ಉಪಾಸನಾ ಪದ್ಧತಿಯಾಗಿದೆ. ಯಾಗ-ಯಜ್ಞಗಳಿಂದ ಸಮಾಜದಲ್ಲಿ ಧರ್ಮಶ್ರದ್ಧೆ, ಸಾತ್ವಿಕತೆ ಹಾಗೂ ಆಧ್ಯಾತ್ಮಿಕ ಜಾಗೃತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಸನಾತನ ಸಂಸ್ಥೆಯ ವತಿಯಿಂದ ಈವರೆಗೆ ದೇಶಾದ್ಯಂತ 1,300ಕ್ಕೂ ಅಧಿಕ ವಿವಿಧ ಯಾಗಗಳನ್ನು ಆಯೋಜಿಸಲಾಗಿದ್ದು, ಇದೇ ಪರಂಪರೆಯಲ್ಲಿ ಶ್ರೀಕೃಷ್ಣನ ಪವಿತ್ರ ಕ್ಷೇತ್ರ ಉಡುಪಿಯಲ್ಲಿ ಮಹಾಧನ್ವಂತರಿ ಯಾಗ ನಡೆಯುತ್ತಿದೆ ಎಂದು ತಿಳಿಸಿದರು.

ಯಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ, ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳಿಗೂ ಆಹ್ವಾನಿಸಲಾಗಿದೆ.

ಉಡುಪಿಯ ಅಷ್ಟಮಠಗಳ ಯತಿಗಳಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರಿಗೂ ಆಮಂತ್ರಣ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಈಗಾಗಲೇ ಸುಮಾರು 5 ಸಾವಿರ ಮಂದಿ ಯಾಗದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಪ್ರಮುಖ ಉದ್ಯಮಿಗಳು, ಧರ್ಮಾಚಾರ್ಯರು, ವೈದ್ಯರು ಹಾಗೂ ಸಮಾಜದ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಸಮಸ್ತ ಹಿಂದೂ ಸಮಾಜದವರು ಧರ್ಮಕಾರ್ಯದಲ್ಲಿ ಒಗ್ಗಟ್ಟಿನಿಂದ ಭಾಗವಹಿಸಿ ಆರೋಗ್ಯವಂತ ಹಾಗೂ ಸುರಕ್ಷಿತ ಭಾರತದ ಸಂಕಲ್ಪಕ್ಕೆ ಕೈಜೋಡಿಸಬೇಕು ಎಂದು ಪೂಜ್ಯರು ಕರೆ ನೀಡಿದರು.

ಯಾಗದ ಅಂಗವಾಗಿ ಅಮೂಲ್ಯ ಧರ್ಮಗ್ರಂಥಗಳು, ಸಾತ್ವಿಕ ಉತ್ಪನ್ನಗಳು ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಧನ್ವಂತರಿ ದೇವರ ಕೃಪೆಗೆ ಪಾತ್ರರಾಗುವುದರ ಜತೆಗೆ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಎಂ.ಜೆ. ಶೆಟ್ಟಿ ಹಾಗೂ ಲಕ್ಷ್ಮಿ ಪೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!