ಉಪ್ಪಳ: ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಲು ಯತ್ನಿಸಿದ ಮಾದಕವಸ್ತು ಸಾಗಾಟಗಾರರ ಕಾರು ನಿಯಂತ್ರಣ ತಪ್ಪಿ ಅಂಗಡಿ ಜಗಲಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಕಾರಿನಲ್ಲಿದ್ದ 3.91 ಗ್ರಾಂ ಎಂಡಿಎಂಎ ಮತ್ತು 6.060 ಗ್ರಾಂ ಗಾಂಜಾದೊಂದಿಗೆ ಮೂವರು ಆರೋಪಿಗಳನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.



ಉಪ್ಪಳ ಮಜಾಲ್ ಅರಬ್ ಕ್ವಾರ್ಟರ್ಸ್ ನಿವಾಸಿ ಮುಹಮ್ಮದ್ ಅಯಾಸ್ (35), ಪಪ್ಪಯತೊಟ್ಟಿ ಬಾದ್ಷಾ ನಿವಾಸಿ ಬಿ.ಎಂ. ಅಮೀರ್ (33) ಹಾಗೂ ಬಂದ್ಯೋಡು ಅಡ್ಕಂ ಫಾರೂಕ್ ಮನೆಯ ಉಮ್ಮರ್ ಫಾರೂಕ್ (35) ಬಂಧಿತ ಆರೋಪಿಗಳು.
ಕೆಂಪು ಬಣ್ಣದ ಕಾರಿನಲ್ಲಿ ಉಪ್ಪಳ ಭಾಗಕ್ಕೆ ಮಾದಕವಸ್ತು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧೀನದಲ್ಲಿರುವ ಡ್ಯಾನ್ಸಾಫ್ ಪೊಲೀಸ್ ತಂಡಕ್ಕೆ ಲಭಿಸಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ಕೈಕಂಬದಲ್ಲಿ ಕಾದು ಕುಳಿತಿದ್ದರು. ಪೊಲೀಸರನ್ನು ಕಂಡ ತಕ್ಷಣ ಆರೋಪಿಗಳು ತಪ್ಪಿಸಿಕೊಳ್ಳಲು ಕಾರನ್ನು ವೇಗವಾಗಿ ಚಲಾಯಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಕಾರು ಕೈಕಂಬ-ಬಾಯಾರು ರಸ್ತೆಯಲ್ಲಿರುವ ಅಂಗಡಿಯೊಂದರ ಜಗಲಿಗೆ ನುಗ್ಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಡ್ಯಾನ್ಸಾಫ್ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ಕಾರನ್ನು ತಪಾಸಣೆ ನಡೆಸಿದಾಗ ಮಾದಕವಸ್ತುಗಳು ಪತ್ತೆಯಾಗಿವೆ. ಬಳಿಕ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಮಾದಕವಸ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

