ಕಾಸರಗೋಡು: ನಕಲಿ ವಿದೇಶಿ ಸೌಂದರ್ಯವರ್ಧಕಗಳ ಮಾರಾಟವನ್ನು ಪತ್ತೆಹಚ್ಚಿ ತಡೆಗಟ್ಟಲು ರಾಜ್ಯ ಡ್ರಗ್ಸ್ ಕಂಟ್ರೋಲ್ ಇಲಾಖೆಯ ಗುಪ್ತಚರ ವಿಭಾಗದ ವಿಶೇಷ ತಂಡವು ಕಾಸರಗೋಡು ಜಿಲ್ಲೆಯಾದ್ಯಂತ ವ್ಯಾಪಕ ದಾಳಿ ಮತ್ತು ಪರಿಶೀಲನೆ ಆರಂಭಿಸಿದೆ.

ಹಲವು ವ್ಯಾಪಾರ ಸಂಸ್ಥೆಗಳಲ್ಲಿದ್ದ ಫೇಸ್ಕ್ರೀಮ್ ಸೇರಿದಂತೆ ವಿವಿಧ ಸೌಂದರ್ಯವರ್ಧಕಗಳ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು ಪತ್ತೆಯಾದಲ್ಲಿ ಮಾರಾಟಗಾರರು ಮತ್ತು ತಯಾರಕರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಲಪ್ಪುರದ 17ರ ಹರೆಯದ ವಿದ್ಯಾರ್ಥಿನಿ ಆನ್ಲೈನ್ನಲ್ಲಿ ಖರೀದಿಸಿದ ಪಾಕಿಸ್ತಾನ ನಿರ್ಮಿತ ಎಫ್ ಟ್ಯೂನ್ ಫೇಸ್ ಕ್ರೀಮ್ ಬಳಸಿ ಕಿಡ್ನಿಗೆ ಗಂಭೀರ ಹಾನಿಯಾದ ಘಟನೆಯ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಚುರುಕುಗೊಂಡಿದೆ.ವಿದ್ಯಾರ್ಥಿನಿಗೆ ಕ್ರೀಮ್ ಪೂರೈಸಿದ ಕಾಸರಗೋಡಿನ ಮಹಿಳೆಯ ಕುರಿತು ತನಿಖೆ ನಡೆಸಿ ನೋಟೀಸ್ ನೀಡಲಾಗಿದೆ.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಕಾರ್ಯಾಚರಣೆ ಮುಂದುವರಿದಿದೆ. ದುಬೈ ಮೂಲಕ ಕೇರಳ ಸೇರಿದಂತೆ ಭಾರತಕ್ಕೆ ಮಾರಕ ಕ್ರೀಮ್ಗಳನ್ನು ಪೂರೈಸುತ್ತಿರುವ ಪಾಕಿಸ್ತಾನದ ಪಾತ್ರ ಹಾಗೂ ಜೈವಿಕ ದಾಳಿಯ ಶಂಕೆಯ ಬಗ್ಗೆ ಕೇಂದ್ರ ತನಿಖಾ ತಂಡಗಳೂ ತನಿಖೆ ಆರಂಭಿಸಿವೆ.

